ADVERTISEMENT

ಮಹಿಳಾ ಅಭ್ಯರ್ಥಿ ರಚನಾ ವಿರುದ್ಧ ಎಫ್‌ಐಆರ್: ಅಕ್ರಮ ಎಸಗಿ ‘ಮೊದಲ ರ‍್ಯಾಂಕ್‌’ ?

​ಪ್ರಜಾವಾಣಿ ವಾರ್ತೆ
Published 2 ಮೇ 2022, 19:16 IST
Last Updated 2 ಮೇ 2022, 19:16 IST
ರಚನಾ ಹನುಮಂತ
ರಚನಾ ಹನುಮಂತ   

ಬೆಂಗಳೂರು: ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಮೊದಲ ರ‍್ಯಾಂಕ್‌ (ಮಹಿಳಾ ವಿಭಾಗ) ಪಡೆದಿದ್ದ ವಿಜಯಪುರದ ರಚನಾ ಹನುಮಂತ ಸಹ ಅಕ್ರಮ ಎಸಗಿರುವುದು ಸಿಐಡಿ ತನಿಖೆಯಿಂದ ಪತ್ತೆಯಾಗಿದ್ದು, ಅವರ ವಿರುದ್ಧವೂ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಅಕ್ರಮ ಎಸಗಿದ್ದ ಆರೋಪದಡಿ 22 ಅಭ್ಯರ್ಥಿಗಳ ವಿರುದ್ಧ ಸಿಐಡಿ ಆರ್ಥಿಕ ಗುಪ್ತದಳ ವಿಭಾಗದ ಡಿವೈಎಸ್ಪಿ ಪಿ. ನರಸಿಂಹಮೂರ್ತಿ ನೀಡಿದ್ದರು. ಇದರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ರಚನಾ ಕೂಡಾ ಆರೋಪಿ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಿಐಡಿ ವಿಚಾರಣೆ ಎದುರಿಸಿದ್ದ ರಚನಾ ಅವರ ಒಎಂಆರ್ ಕಾರ್ಬನ್ ಪ್ರತಿ ಹಾಗೂ ಅಸಲಿ ಪ್ರತಿ ನಡುವೆ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿದೆ. ರಚನಾ ಸಹ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಅವರ ಒಎಂಆರ್‌ ಪ್ರತಿಯನ್ನು ಸಿಐಡಿ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ’ ಎಂದೂ ತಿಳಿಸಿವೆ.

ADVERTISEMENT

‘ಕ್ರಮ ಸಂಖ್ಯೆ 9252741 ಅಭ್ಯರ್ಥಿ ಆಗಿದ್ದ ರಚನಾ ಹನುಮಂತ, ಪತ್ರಿಕೆ – 1ರಲ್ಲಿ (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) 25 ಅಂಕ ಹಾಗೂ ಪತ್ರಿಕೆ –2ರಲ್ಲಿ (ಸಾಮಾನ್ಯ ಅಧ್ಯಯನ) 128.25 ಅಂಕ ಪಡೆದಿದ್ದರು. ಒಟ್ಟು 153.25 ಅಂಕ ಪಡೆದು ಮಹಿಳಾ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಪತ್ರಿಕೆ–2ರ ಒಎಂಆರ್ ಪ್ರತಿಯಲ್ಲೇ ಸಾಕಷ್ಟು ವ್ಯತ್ಯಾಸಗಳು ಇದೆ’ ಎಂದೂ ಮೂಲಗಳು ತಿಳಿಸಿವೆ.

ಪ್ರತಿಭಟನೆಯಲ್ಲಿದ್ದ ರಚನಾ: 545 ಪಿಎಸ್‌ಐ ನೇಮಕಾತಿಗಾಗಿ ಮರು ಲಿಖಿತ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸುತ್ತಿದ್ದಂತೆ, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ್ದರು. ರಚನಾ ಹನುಮಂತ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.