ADVERTISEMENT

ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ: ಕಣ್ಗಾವಲು

ಬಿಗಿ ಪೊಲೀಸ್ ಭದ್ರತೆ, ಸಿ.ಸಿ.ಟಿ.ವಿ. ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 20:29 IST
Last Updated 27 ಫೆಬ್ರುವರಿ 2019, 20:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಿ.ಸಿ ಟಿ.ವಿ ಕಣ್ಗಾವಲು, ಪೊಲೀಸ್‌ ಭದ್ರತೆಯ ಮಧ್ಯೆ ದ್ವಿತೀಯ ಪಿಯುಸಿ ಪರೀಕ್ಷೆ ಶುಕ್ರವಾರದಿಂದ (ಮಾರ್ಚ್‌ 1) ಆರಂಭಗೊಳ್ಳಲಿದೆ.

ಇದಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ತಿಳಿಸಿದರು.

ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆಗಳ ಸೋರಿಕೆ ಆಗದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಆತಂಕಪಡಬೇಕಾಗಿಲ್ಲ ಎಂದು ಅವರು ಹೇಳಿದರು.

ADVERTISEMENT

ಮೂರು ವರ್ಷಗಳ ಹಿಂದೆ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಗೃಹಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.ಆ ಪ್ರಕಾರ, ಕರ್ನಾಟಕ ಸೆಕ್ಯುರ್‌ ಎಕ್ಸಾಮಿನೇಷನ್‌ ಸಿಸ್ಟಮ್‌ ಜಾರಿಗೊಳಿಸಲಾಗಿದೆ. ಈ ಹಿಂದೆ ಪರೀಕ್ಷಾ ಅಕ್ರಮಗಳನ್ನು ನಡೆಸಿದವರ ಮೇಲೆ ಕಣ್ಗಾವಲು ಇಡಲಾಗಿದೆ. ಪರೀಕ್ಷಾ ಅಕ್ರಮಗಳನ್ನು ನಡೆಸಿದರೆ, ‘ಕೋಕಾ’ ಕಾಯ್ದೆಯಡಿ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪರೀಕ್ಷಾ ಅಕ್ರಮಗಳನ್ನು ತಡೆಯಲು 2026 ವಿಶೇಷ ಮೇಲ್ವಿಚಾರಕರ ತಂಡಗಳನ್ನು ರಚಿಸಲಾಗಿದೆ ಎಂದರು.

ಪದವಿ ಪೂರ್ವ ಕೋರ್ಸ್‌ಗಳ 34 ವಿಷಯಗಳು ಹಾಗೂ ಎನ್‌ಎಸ್‌ಕ್ಯುಎಫ್‌ನ 5 ವಿಷಯಗಳು ಇರುತ್ತವೆ. ಒಟ್ಟು 38 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಇದಕ್ಕಾಗಿ 54 ಕೇಂದ್ರಗಳನ್ನು ರಾಜ್ಯದಾದ್ಯಂತ ಗುರುತಿಸಲಾಗಿದೆ ಎಂದರು.

ಸರ್ವರ್‌ಗೆ ಅಂಕಗಳ ಅಪ್‌ಲೋಡ್‌: ಉತ್ತರಪತ್ರಿಕೆಗಳ ಮೌಲ್ಯ ಮಾಪನದ ನಂತರ ಅಂಕಗಳನ್ನು ಆನ್‌ಲೈನ್‌ ಮೂಲಕ ಎಸ್‌ಡಿಸಿ ಸರ್ವರ್‌ಗೆ ಮೌಲ್ಯಮಾಪನ ಕೇಂದ್ರಗಳಿಂದಲೇನೇರವಾಗಿ ಅಪ್‌ಲೋಡ್‌ ಮಾಡಲಾಗುವುದು. ಇದರಿಂದ ಫಲಿತಾಂಶವನ್ನು ಸುರಕ್ಷಿತವಾಗಿ ಮತ್ತು ಶೀಘ್ರ ಪ್ರಕಟಿಸಲು ಸಾಧ್ಯ ಎಂದು ಉಮಾಶಂಕರ್‌ ವಿವರಿಸಿದರು.

ಈ ಬಾರಿ ಶೇ 75ಕ್ಕಿಂತ ಹಾಜರಾತಿ ಕಡಿಮೆ ಇರುವ 2,500 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನರ್ಹರಾಗಿದ್ದಾರೆ ಎಂದರು.

ಈ ಶೈಕ್ಷಣಿಕ ವರ್ಷದಿಂದಲೇ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಹಾಗೂ ಲೆಕ್ಕ ಶಾಸ್ತ್ರ ವಿಷಯಗಳಿಗೆ ಎನ್‌ಸಿಇಆರ್‌ಟಿ ಪಠ್ಯವನ್ನು ಪರಿಚಯಿಸಲಾಗಿತ್ತು. ಮಾದರಿ ಪ್ರಶ್ನೆ ಪತ್ರಿಕೆಯನ್ನು ಈಗಾಗಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ: ಈ ವರ್ಷ 6,73,606 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, 12,000 ವಿದ್ಯಾರ್ಥಿಗಳು ಕಡಿಮೆ ಆಗಿದ್ದಾರೆ. ಪರೀಕ್ಷೆಗೆ ಹಾಜರಾಗುವ ಬಾಲಕಿಯರ ಸಂಖ್ಯೆ ಕಳೆದ ಬಾರಿಗಿಂತ ಈ ವರ್ಷ ಹೆಚ್ಚಾಗಿದೆ ಎಂದು ಉಮಾಶಂಕರ್‌ ತಿಳಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಪಿ.ಸಿ.ಜಾಫರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.