ADVERTISEMENT

ಪಿಯು ಉಪನ್ಯಾಸಕರ ನೇಮಕ: ಆಯೋಗದ ಅನುಮತಿ ಸಿಕ್ಕರೆ ಪಟ್ಟಿ ಬಿಡುಗಡೆ–ಸುರೇಶ್‌ ಕುಮಾರ್

ಸಚಿವರಿಂದ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 3:05 IST
Last Updated 24 ಸೆಪ್ಟೆಂಬರ್ 2019, 3:05 IST
ಎಸ್. ಸುರೇಶ್‌ ಕುಮಾರ್‌
ಎಸ್. ಸುರೇಶ್‌ ಕುಮಾರ್‌   

ಬೆಂಗಳೂರು:ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಅಂತಿಮ ನೇಮಕಾತಿ ಪಟ್ಟಿ ಸಿದ್ಧವಾಗಿದ್ದು, ಚುನಾವಣಾ ಆಯೋಗ ಅನುಮತಿ ನೀಡಿದರೆ ತಕ್ಷಣ ಅದನ್ನು ಬಿಡುಗಡೆಗೊಳಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಕ್ಯಾಪ್ಟನ್‌ ಡಾ. ಕೆ. ರಾಜೇಂದ್ರ ಹೇಳಿದರು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಕೀ ಉತ್ತರದಲ್ಲೇ ತಪ್ಪು, ಉಳಿದ ಬಿಕ್ಕಟ್ಟು’ ಸುದ್ದಿಯ ಹಿನ್ನೆಲೆಯಲ್ಲಿ ಸೋಮವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕೆ. ಸುರೇಶ್‌ ಕುಮಾರ್‌ ಅವರು ತಮ್ಮ ಕಚೇರಿಗೆ ಕೆಇಎ ಅಧಿಕಾರಿಗಳನ್ನು ಕರೆಸಿಕೊಂಡು ಮಾಹಿತಿ ಪಡೆದ ವೇಳೆ ಅವರು ಈ ವಿಷಯ ತಿಳಿಸಿದರು.

‘ಕೆಇಎ ನಡೆಸಿದ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿನ ಕೀ ಉತ್ತರದಲ್ಲಿ ತಪ್ಪುಗಳು ಮತ್ತು ಗೊಂದಲಗಳು ಇರುವುದು ನಿಜ.ಆದರೆ ಪರಿಣಿತರ ಸಮಿತಿ ಹಲವು ಪುಸ್ತಕಗಳನ್ನು ಗಮನಿಸಿ ಕೀ ಉತ್ತರ ಸಿದ್ಧಪಡಿಸಿದ್ದು, ಅದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಉತ್ತರಗಳಲ್ಲಿನ ಗೊಂದಲದಿಂದಾಗಿ ಗ್ರೇಸ್‌ ಅಂಕ ಕೊಟ್ಟಿದ್ದೂ ಇದೆ.ಇದರ ಹೊರತಾಗಿ ಯಾರಿಗೇ ಆಗಲಿ ಉಪಕಾರವಾಗುವ ದೃಷ್ಟಿಯಿಂದ ಅಥವಾ ಅನ್ಯಾಯವಾಗಬೇಕೆಂಬ ದುರುದ್ದೇಶದಿಂದ ಈ ಕೀ ಉತ್ತರಗಳನ್ನು ಸಮರ್ಥಿಸುತ್ತಿಲ್ಲ’ ಎಂದು ರಾಜೇಂದ್ರ ಅವರು ಸಚಿವರಿಗೆ ಮನವರಿಕೆ ಮಾಡಿದರು.

ADVERTISEMENT

‘ನ್ಯಾಯಾಲಯದಲ್ಲಿ ಪ್ರಕರಣ ಇದ್ದರೆ ಫಲಿತಾಂಶ ಪ್ರಕಟಿಸಬಾರದು ಎಂದೇನಿಲ್ಲ. ಫಲಿತಾಂಶಕ್ಕೆ ತಡೆಯಾಜ್ಞೆ ನೀಡಿದರೆ ಮಾತ್ರ ಏನೂ ಮಾಡುವಂತಿಲ್ಲ. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಕೆಎಟಿ) ಇರುವ ಪ್ರಕರಣಗಳಿಗೆ ನಾವು ಉತ್ತರ ನೀಡಲು ಸಿದ್ಧರಿದ್ದೇವೆ. ಅದಕ್ಕೆ ಬೇಕಾದ ದಾಖಲೆಗಳು ನಮ್ಮಲ್ಲಿವೆ’ ಎಂದು ಅವರು ಸಚಿವರಿಗೆ ತಿಳಿಸಿದರು.

ಪಾರದರ್ಶಕತೆ ಅಗತ್ಯ:‘ಸ್ಪರ್ಧಾತ್ಮಕ ಪರೀಕ್ಷೆ, ಬಳಿಕ ಉದ್ಯೋಗ ಪಡೆಯುವುದು ಎಂದರೆ ಅದು ವ್ಯಕ್ತಿಯ ಭವಿಷ್ಯದ ಪ್ರಶ್ನೆ. ಯಾರಿಗೂ ತೊಂದರೆ ಆಗಬಾರದು. ಕೆಇಎ ಸಮರ್ಪಕವಾಗಿ ಪರೀಕ್ಷೆ ನಡೆಸುವ ಪರಿಪಾಠ ಇಟ್ಟುಕೊಂಡಿದ್ದು, ಪಿಯು ಉಪನ್ಯಾಸಕರ ನೇಮಕಾತಿಯಲ್ಲಿ ಅಪಸ್ವರ ಕೇಳಿಬಂದಿದ್ದಕ್ಕೆ ಬೇಸರವಾಯಿತು. ಯಾರಲ್ಲೂ ಗೊಂದಲ ಇರಬಾರದು ಎಂಬ ಕಾರಣಕ್ಕೆ ಈ ಸಭೆ ಕರೆಯಲಾಗಿದೆ. ನೇಮಕಾತಿಯಲ್ಲಿ ಯಾವುದೇ ತಪ್ಪು ಆಗಿಲ್ಲ ಎಂದಾದರೆ ಫಲಿತಾಂಶ ಪ್ರಕಟಿಸುವುದಕ್ಕೆ ನನ್ನ ಅಭ್ಯಂತರ ಇಲ್ಲ’ ಎಂದು ಸಚಿವ ಸುರೇಶ್‌ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.