ಹೈಕೋರ್ಟ್
ಬೆಂಗಳೂರು: ‘ವೈಯಕ್ತಿಕ ದ್ವೇಷದ ಬಲಿಪೀಠ ಏರಿ ಕ್ಷುಲ್ಲಕ ಕಾರಣಗಳಿಗಾಗಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವ ಪ್ರಕರಣಗಳಲ್ಲಿ ಪೊಲೀಸರು ಅತ್ಯಂತ ಮುತುವರ್ಜಿಯಿಂದ ಮುಂದುವರಿಯಬೇಕು’ ಎಂದು ಹೈಕೋರ್ಟ್, ಪೊಲೀಸರಿಗೆ ಕಠಿಣ ಎಚ್ಚರಿಕೆ ನೀಡಿದೆ.
‘ತೊಂದರೆ ನೀಡುತ್ತಿದೆ ಎಂಬ ಕಾರಣವನ್ನು ಮುಂದುಮಾಡಿ ಬೆಕ್ಕನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ’ ಎಂದು ಆರೋಪಿಸಲಾದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿದ್ದ ಆನೇಕಲ್ ತಾಲ್ಲೂಕಿನ ಶಿಕಾರಿಪಾಳ್ಯದ ಸಿರಾಜ್ ಲೇಔಟ್ ನಿವಾಸಿ ತಾಹಾ ಹುಸೈನ್ (31) ಅವರ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
‘ನನ್ನ ಮನೆಯ ಬೆಕ್ಕು ಕಳವಾಗಿದೆ ಎಂದು ಆರೋಪಿಸುವ ಮೂಲಕ ನಾಟಕದ ಅಂಕಗಳನ್ನೇ ಹೊಸೆದಿರುವ ಈ ಪ್ರಕರಣದ ದೂರುದಾರ ಮಹಿಳೆ ನಿಖಿತಾ ಅಂಜನಾ ಅಯ್ಯರ್ ವಿರುದ್ಧ ತಾಹಾ ಹುಸೈನ್ ಕ್ರಿಮಿನಲ್ ಪ್ರಕರಣ ದಾಖಲಿಸಲು ಸ್ವತಂತ್ರರಿದ್ದಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ತಾಹಾ ಹುಸೈನ್ ವಿರುದ್ಧ ಆನೇಕಲ್‌ನ ನಾಲ್ಕನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶಿಸಿದೆ.
‘ಇಂತಹವುಗಳಿಂದ ನ್ಯಾಯಾಂಗದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದಂತಾಗುವುದನ್ನು ಹೊರತುಪಡಿಸಿ ಬೇರಾವುದೇ ಪುರುಷಾರ್ಥ ಸಾಧನೆಯಾಗುವುದಿಲ್ಲ. ಈ ಪ್ರಕರಣದಲ್ಲಿ ಡೈಸಿ ಎಂಬ ಬೆಕ್ಕಿಗೆ ನ್ಯಾಯ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪೊಲೀಸರು ಕಠಿಣ ಎಚ್ಚರಿಕೆಗೆ ಅರ್ಹರಾಗಿದ್ದಾರೆ’ ಎಂದು ಕಿಡಿ ಕಾರಿದೆ.
ಇಂತಹ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದ್ದೇ ಆದರೆ ಅದು ನ್ಯಾಯಾಂಗದ ವಿಡಂಬನೆಯಾಗುತ್ತದೆ.ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ಏನೀ ವಿಚಿತ್ರ ಪ್ರಕರಣ?
‘ನಾನು ಸಾಕಿದ್ದ ಡೈಸಿ ಬೆಕ್ಕನ್ನು ತಾಹಾ ಹುಸೈನ್ ತಮ್ಮ ಮನೆಯಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಇದು ನಮ್ಮ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ನಮ್ಮ ಬೆಕ್ಕನ್ನು ವಾಪಸು ಕೊಡುವಂತೆ ನಾನು ಹೋಗಿ ಕೇಳಿದಾಗ ತಾಹಾ ಹುಸೈನ್ ನನಗೆ ಅವಾಚ್ಯ ಶಬ್ದಗಳಿಂದ ಬೈದು ಲೈಂಗಿಕ ಸನ್ನೆ ಮಾಡಿ ಇನ್ನೊಮ್ಮೆ ನಮ್ಮ ಮನೆ ಬಳಿ ಬಂದರೆ ಪ್ರಾಣಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಸಿರಾಜ್ ಲೇಔಟ್‌ನ ನಿವಾಸಿ ನಿಖಿತಾ ಅಂಜನಾ ಅಯ್ಯರ್ (41) ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ತಾಹಾ ಹುಸೈನ್ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 504 506 ಮತ್ತು 509ರ ಅಡಿಯಲ್ಲಿ ಜೀವ ಬೆದರಿಕೆ ಶಾಂತಿಭಂಗ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಜಿ.ದೇವರಾಜ್ ಹಾಗೂ ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.