ADVERTISEMENT

ಪಿಡಬ್ಲ್ಯೂಡಿ ಎಂಜಿನಿಯರ್ ರಘು ಆಸ್ತಿ ಜಪ್ತಿ

ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಅಧಿಕಾರಿ ವಿರುದ್ಧ ಇ.ಡಿ ಕ್ರಮ

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 20:01 IST
Last Updated 12 ಜನವರಿ 2019, 20:01 IST
   

ಬೆಂಗಳೂರು: ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಆಪ್ತ ಎನ್ನಲಾದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್‌ ಎಲ್‌. ರಘು ಅವರಿಗೆ ಸೇರಿದ ₹ 1.92 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಜಪ್ತಿ ಮಾಡಿದೆ.

ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ರಘು ಅವರ ಆಸ್ತಿ ಜಪ್ತಿ ಮಾಡಲಾಗಿದೆ. ಬೆಂಗಳೂರು ಹಾಗೂ ಮಂಡ್ಯದಲ್ಲಿ ರಘು ಅವರಿಗೆ ಸೇರಿದ ನಿವೇಶನ, ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳಿವೆ. ಲೇವಾದೇವಿ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ತನಿಖೆ ಕೈಗೊಂಡಿದ್ದ ಇ.ಡಿ, 11 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿಕೊಂಡಿದೆ.

ಲೋಕಾಯುಕ್ತ ದಾಖಲಿಸಿದ್ದ ಎಫ್‌ಐಆರ್ ಹಾಗೂ ದೋಷಾರೋಪ ಪಟ್ಟಿಯನ್ನು ಆಧರಿಸಿ ಇ.ಡಿ, ರಘು ಅವರ ವಿರುದ್ಧ ತನಿಖೆ ಕೈಗೊಂಡಿದೆ. ರಘು, ಸಿದ್ದರಾಮಯ್ಯ ಅವರಿಗೆ ದುಬಾರಿ ಹ್ಯೂಬ್ಲೊ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದ ಆರೋಪಕ್ಕೂ ಒಳಗಾಗಿದ್ದರು. ಈ ಪ್ರಕರಣದ ತನಿಖೆಗೆ ಸಮನ್ವಯ ಸಮಿತಿ ಅಧ್ಯಕ್ಷರ ಪ್ರಾಸಿಕ್ಯೂಷನ್‌ಗೂ ಅನುಮತಿ ನೀಡುವಂತೆ ಕೇಳಲಾಗಿತ್ತು. ಆದರೆ, ಅನುಮತಿ ದೊರೆತಿರಲಿಲ್ಲ.

ADVERTISEMENT

ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು 2012ರ ನವೆಂಬರ್‌ 8ರಂದು ರಘುಅವರ ಮನೆ ಮೇಲೆ ದಾಳಿ ಮಾಡಿದ್ದರು. ಅವರ ವಿರುದ್ಧ ಮೊಕದ್ದಮೆ ಹೂಡಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅನುಮತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.