ADVERTISEMENT

ರೈಲ್ವೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಬಾಕಿ ಹಣ ಕೊಡಿಸಿ: ಸೋಮಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಮೇ 2025, 13:36 IST
Last Updated 15 ಮೇ 2025, 13:36 IST
   

ಕುಷ್ಟಗಿ (ಕೊಪ್ಪಳ ಜಿಲ್ಲೆ): ‘ರಾಜ್ಯದಲ್ಲಿ ಆಗಬೇಕಾದ ರೈಲ್ವೆ ಸಂಬಂಧಿತ ಕಾಮಗಾರಿಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ನೀಡಬೇಕಾದ ₹837 ಕೋಟಿ ಬಾಕಿ ಉಳಿದಿದ್ದು, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರಡ್ಡಿ ತ್ವರಿತವಾಗಿ ಈ ಹಣ ಕೊಡಿಸಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಆಗ್ರಹಿಸಿದರು.

ಪಟ್ಟಣದಲ್ಲಿ ಗುರುವಾರ ಕುಷ್ಟಗಿ–ತಳಕಲ್‌ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ ’ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ₹7 ಲಕ್ಷ ಕೋಟಿ ಖರ್ಚು ಮಾಡುತ್ತಿದೆ. ಈ ವರ್ಷದ ಅಂತ್ಯದಲ್ಲಿ ದೇಶದ ಎಲ್ಲ ರೈಲು ಮಾರ್ಗಗಳನ್ನು ವಿದ್ಯುದ್ವೀಕರಣ ಮಾಡಲಾಗುವುದು’ ಎಂದು ತಿಳಿಸಿದರು.

‘ಪ್ರಸ್ತುತ ದೇಶದಲ್ಲಿ 1,400 ನಿಲ್ದಾಣಗಳನ್ನು ₹20 ಸಾವಿರ ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಇದರಲ್ಲಿ ರಾಜ್ಯದ 61 ನಿಲ್ದಾಣಗಳು ಕೂಡ ಸೇರಿವೆ. ಆಲಮಟ್ಟಿಯಿಂದ–ಯಾದಗಿರಿ ತನಕದ 162 ಕಿ.ಮೀ. ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ ಮಾಡಲು ₹4.05 ಕೋಟಿ, ಭದ್ರಾವತಿಯಿಂದ ಚನ್ನಗಿರಿ ಮಾರ್ಗವಾಗಿ ಚಿಕ್ಕಜಾಜೂರು ತನಕ 73 ಕಿ.ಮೀ. ಸರ್ವೆ ಮಾಡಲು ರೈಲ್ವೆ ಮಂಡಳಿಯ ಅನುಮತಿ ಲಭಿಸಿದೆ. ಈ ಕಾಮಗಾರಿಗೆ ₹5,875 ಕೋಟಿ ಅಂದಾಜಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.