ADVERTISEMENT

ಮಂಡ್ಯದಲ್ಲಿ ಭಾರಿ ಮಳೆ: ಧರೆಗುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 19 ಮೇ 2021, 13:24 IST
Last Updated 19 ಮೇ 2021, 13:24 IST

ಮಂಡ್ಯ: ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಅನುಭವಿಸಿದರು. 10ಕ್ಕೂ ಹೆಚ್ಚು ಮರಗಳು ಧರೆಗುರುಳಿದವು.

ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ನೂರಡಿ ರಸ್ತೆ, ಆರ್‌.ಪಿ.ರಸ್ತೆ, ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಮರಗಳು ಉರುಳಿ ಬಿದ್ದವು. ಆರ್‌.ಪಿ ರಸ್ತೆಯಲ್ಲಿ ಮರ ಬಿದ್ದ ಕಾರಣ ಆಟೊ, ಬೈಕ್‌ಗಳು ಜಖಂಗೊಂಡವು. ವಿವಿಧೆಡೆ ವಿದ್ಯುತ್‌ ಕಂಬಗಳ ಮೇಲೆ ಮರ ಉರುಳಿದ ಪರಿಣಾಮ ರಾತ್ರಿಯಿಡೀ ವಿದ್ಯುತ್‌ ಸ್ಥಗಿತಗೊಳಿಸಲಾಗಿತ್ತು. ಲಾಕ್‌ಡೌನ್‌ ನಿಂದ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಯಾವುದೇ ಅಪಾಯ ಎದುರಾಗಲಿಲ್ಲ.

ಮನೆಗೆ ನುಗ್ಗಿದ ನೀರು: ಆಲಹಳ್ಳಿ ಬಡಾವಣೆ ಕೊಳೆಗೇರಿ, ಬೀಡಿ ಕಾರ್ಮಿಕರ ಕಾಲೊನಿಯಯಲ್ಲಿ ಚರಂಡಿಗಳು ತುಂಬಿ ಉಕ್ಕಿದ ಪರಿಣಾಮ ಮನೆಯೊಳಗೆ ನೀರು ನುಗ್ಗಿ ಅಲ್ಲಿಯ ನಿವಾಸಿಗಳು ಪರದಾಡುವಂತಾಯಿತು. ನೀರು ನುಗ್ಗಿದ ಪರಿಣಾಮ ಧಾನ್ಯ, ಬಟ್ಟೆಬರೆ ಹಾಳಾದವು. ಮಳೆ ಸುರಿಯುತ್ತಿದ್ದಾಗ ಜನರು ಅಗತ್ಯ ವಸ್ತುಗಳೊಂದಿಗೆ ಹೊರ ಬಂದು ರಸ್ತೆಯಲ್ಲಿ ನಿಂತಿದ್ದರು.

ADVERTISEMENT

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆ ಕಟ್ಟಿದ್ದರೂ ನಿವಾಸಿಗಳಿಗೆ ಹಂಚಿಕೆ ಮಾಡದ ಪರಿಣಾಮ ಮಳೆಗಾಲದಲ್ಲಿ ಸಂಕಷ್ಟ ಸ್ಥಿತಿ ಅನುಭವಿಸುವಂತಾಗಿದೆ ಎಂದು ಆಲಹಳ್ಳಿ ಕೊಳೆಗೇರಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.