ADVERTISEMENT

ಗಾಳಿ, ಮಳೆ: ವಿದ್ಯುತ್‌ ಕಂಬಗಳು ಧರೆಗೆ

ಮೈಸೂರಿನಲ್ಲಿ 260 ವಿದ್ಯುತ್‌ ಕಂಬ, 50 ಟ್ರಾನ್ಸ್‌ಫಾರ್ಮರ್‌ಗೆ ಹಾನಿ

​ಪ್ರಜಾವಾಣಿ ವಾರ್ತೆ
Published 4 ಮೇ 2020, 19:44 IST
Last Updated 4 ಮೇ 2020, 19:44 IST
ಭಾನುವಾರ ಬಿರುಗಾಳಿ ಸಹಿತ ಮಳೆಗೆ, ಮೈಸೂರಿನ ಅಂಬೇಡ್ಕರ್‌ ರಸ್ತೆಯಲ್ಲಿ ಮುರಿದು ಬಿದ್ದಿರುವ ಮರಗಳು ಹಾಗೂ ತುಂಡಾಗಿರುವ ವಿದ್ಯುತ್‌ ಕಂಬ
ಭಾನುವಾರ ಬಿರುಗಾಳಿ ಸಹಿತ ಮಳೆಗೆ, ಮೈಸೂರಿನ ಅಂಬೇಡ್ಕರ್‌ ರಸ್ತೆಯಲ್ಲಿ ಮುರಿದು ಬಿದ್ದಿರುವ ಮರಗಳು ಹಾಗೂ ತುಂಡಾಗಿರುವ ವಿದ್ಯುತ್‌ ಕಂಬ   

ಬೆಂಗಳೂರು: ರಾಜ್ಯದಲ್ಲಿ ಮಳೆ, ಗಾಳಿ ಮುಂದುವರಿದಿದೆ. ಬಿರುಗಾಳಿ, ಧಾರಾಕಾರ ಮಳೆಯಿಂದ ಮರಗಳು ಬಿದ್ದು ಮೈಸೂರು, ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಹಲವು ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ವಿವಿಧೆಡೆಬಿರುಗಾಳಿಗೆ ಹಲವು ಮನೆಗಳ ಹೆಂಚು ಹಾಗೂ ಶೀಟುಗಳು ಹಾರಿಹೋಗಿವೆ. ತೆಂಗು, ಅಡಿಕೆ, ಬಾಳೆ, ನೀಲಗಿರಿ, ಬೇವು, ಹುಣಸೆ ಸೇರಿ ಇನ್ನಿತರ ಮರಗಳು ಧರೆಗುಳಿದ್ದು

ಮೈಸೂರು ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಬಿರುಗಾಳಿ ಸಹಿತ ಬಿರುಸಿನ ಮಳೆಯಾಗಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಮನೆಗಳಿಗೂ ಹಾನಿಯಾಗಿದೆ.

ADVERTISEMENT

ಜಿಲ್ಲೆಯಲ್ಲಿ 260 ವಿದ್ಯುತ್‌ ಕಂಬಗಳು ಬಿದ್ದಿದ್ದು, 50 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿ ಆಗಿದೆ. ಮೈಸೂರು ನಗರದಲ್ಲೇ 200 ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಸೆಸ್ಕ್‌ಗೆ ಅಂದಾಜು ₹50 ಲಕ್ಷ ನಷ್ಟವಾಗಿದೆ‘ ಎಂದು ಸೆಸ್ಕ್‌ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಮುನಿಗೋಪಾಲರಾಜು ತಿಳಿಸಿದ್ದಾರೆ.

ತಿ.ನರಸೀಪುರ ತಾಲ್ಲೂಕಿನ ಸೀಹಳ್ಳಿ ಗ್ರಾಮದಲ್ಲಿ ಚಿಕ್ಕತಾಯಮ್ಮ ಅವರ ಮನೆಯ ಚಾವಣಿ ಹೆಂಚು, ರೀಪರ್ ಬಿರುಗಾಳಿಗೆ ಹಾರಿ ಹೋಗಿವೆ. ಕೆ.ಆರ್.ನಗರ ತಾಲ್ಲೂಕಿನ ಕೆಲವೆ ಮರಗಳು ಉರುಳಿ, ವಿದ್ಯುತ್‌ ಕಂಬಗಳು ಬಿದ್ದಿವೆ.

ಚಿಕ್ಕಮಗಳೂರುಜಿಲ್ಲೆಯ ಬಯಲುಸೀಮೆ ಮತ್ತು ಮಲೆನಾಡು ಭಾಗದ ವಿವಿಧೆಡೆ ಸೋಮವಾರ ಸಂಜೆ ಉತ್ತಮ ಮಳೆಯಾಗಿದೆ. ಗುಡುಗು, ಮಿಂಚು, ಗಾಳಿ ಆರ್ಭಟ ಇತ್ತು.

ತರೀಕೆರೆಯಲ್ಲಿ ಮರ ಉರುಳಿ ಕಾರು ಜಖಂಗೊಂಡಿದೆ. ಅಂಗಡಿಗಳಿಗೆ ನೀರು ನುಗ್ಗಿದೆ. ಕೊಪ್ಪದಲ್ಲಿ ಗಾಳಿ ಆರ್ಭಟ ಜೋರಾಗಿತ್ತು.

ಚಿಕ್ಕಮಗಳೂರು, ಎನ್‌.ಆರ್‌.ಪುರ, ಮೂಡಿಗೆರೆ ಭಾಗದಲ್ಲಿ ಮಳೆಯಾಗಿದೆ.

ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ ಧಾರಾಕಾರ ಮಳೆಯಾಗಿದೆ. ನಾಗರಕೊಡಿಗೆಯಲ್ಲಿ ಮರಬಿದ್ದು ಡಿ.ಎಸ್. ರಾಘವೇಂದ್ರ ಜೋಯ್ಸ್ ಅವರಿಗೆ ಸೇರಿದ ಕೊಟ್ಟಿಗೆ ಹಾನಿಗೊಂಡಿದೆ. 6 ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ.

ದಾವಣಗೆರೆ ಜಿಲ್ಲೆಯಲ್ಲಿ ಉಚ್ಚಂಗಿದುರ್ಗ ಸಮೀಪದ ಅರಸೀಕೆರೆ ಭಾಗದಲ್ಲಿ ಸಾಧಾರಣ ಹಾಗೂ ಮಲೇಬೆನ್ನೂರಿನಲ್ಲಿ ತುಂತುರು ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಬಿರುಸಿನ ಮಳೆ ಸುರಿಯಿತು. ಚಿತ್ರದುರ್ಗ ನಗರ ಹಾಗೂ ಹೊಳಲ್ಕೆರೆಗಳಲ್ಲೂ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.