ADVERTISEMENT

ಮುನಿದ ಮಳೆ, ತಣಿಯದ ಇಳೆ: ಮತ್ತೆ ಭೀಕರ ಬರದತ್ತ ರಾಜ್ಯ

l ವಾಡಿಕೆಗಿಂತ ಕಡಿಮೆ ಮಳೆ l ಬಿತ್ತನೆಯಲ್ಲಿ ಭಾರಿ ಕುಸಿತ

ಎಸ್.ರವಿಪ್ರಕಾಶ್
Published 27 ಜೂನ್ 2019, 20:25 IST
Last Updated 27 ಜೂನ್ 2019, 20:25 IST
   

ಬೆಂಗಳೂರು: ರಾಜ್ಯ ಮತ್ತೊಮ್ಮೆ ಭೀಕರ ಬರಗಾಲವನ್ನು ಎದುರಿಸಲು ಸಜ್ಜಾಗಬೇಕಾಗಿದೆ. ಜೂನ್‌ ಮುಗಿಯುತ್ತಾ ಬಂದರೂ ಮಳೆ ಬೀಳದೇ ಇರುವುದರಿಂದ ಕೆರೆ– ಕುಂಟೆಗಳು, ಜಲಾಶಯಗಳು ಒಣಗಿ ನಿಂತಿವೆ. ಮಳೆಗಾಗಿ ಮುಗಿಲಿನತ್ತ ನೋಡಿ ಕಾಯುವ ಪರಿಸ್ಥಿತಿ ಎದುರಾಗಿದೆ.

ರಾಜ್ಯದ 26 ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ ತಾಂಡವವಾಡುತ್ತಿದೆ. ರೈತರು ಬಿತ್ತನೆ ಮಾಡಲು ಸಾಧ್ಯವಾಗದೇ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಮೋಡ ಬಿತ್ತನೆಯಿಂದ ಮಳೆ ಸುರಿದೀತೆ ಎಂಬ ನಿರೀಕ್ಷೆಯಲ್ಲಿ ರೈತರು ದಿನ ದೂಡುತ್ತಿದ್ದಾರೆ. ಮುಂಗಾರು ಪೂರ್ವ ಅಂದರೆ, ಮೇ ತಿಂಗಳ ಮಳೆ ಕೈಕೊಟ್ಟರೂ, ಜೂನ್‌ನಲ್ಲಿ ಬಿರುಸಿನ ಮುಂಗಾರು ಮಳೆ ಸುರಿಯಬಹುದೆಂಬ ನಿರೀಕ್ಷೆ ಇತ್ತು. ಆದರೆ, ಮೋಡಗಳು ಗಾಳಿಗೆ ಚದುರಿ ದಿಕ್ಕು ಬದಲಿಸಿದ ಕಾರಣ ವಾಡಿಕೆಗಿಂತ ಶೇ 31ರಷ್ಟು ಮಳೆ ಕಡಿಮೆಯಾಗಿದೆ.

ADVERTISEMENT

ಅದರಲ್ಲೂ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಮಳೆ ಪ್ರಮಾಣದಲ್ಲಿ ಭಾರಿ ಕುಸಿತವಾಗಿದೆ. ಕರಾವಳಿ ಪ್ರದೇಶದಲ್ಲಿ ಶೇ 47 ಮತ್ತು ಮಲೆನಾಡು ಪ್ರದೇಶದಲ್ಲಿ ಶೇ 49 ರಷ್ಟು ಕೊರತೆ ಆಗಿದೆ. ಇದರಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರಿನ ಒಳಹರಿವು ಬಂದಿಲ್ಲ. ಜೂನ್‌ನಲ್ಲಿ ಹರಿದು ಬಂದ ನೀರಿನ ಪ್ರಮಾಣ ಕೇವಲ 6 ಟಿಎಂಸಿ ಅಡಿಗಳು. ಕಳೆದ ವರ್ಷ ಇದೇ ಅವಧಿಯಲ್ಲಿ 145 ಟಿಎಂಸಿ ಅಡಿ ನೀರು ಹರಿದು ಬಂದಿತ್ತು.

‘ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ವಾರ್ಷಿಕ ಸರಾಸರಿ 31.5 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿತ್ತು. ಕಳೆದ ವರ್ಷ ಈ ವೇಳೆಗೆ 64 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಆದರೆ, ಈ ಬಾರಿ ಕೇವಲ 2.35 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದು 46 ವರ್ಷಗಳಲ್ಲೇ ಅತ್ಯಂತ ಕಡಿಮೆ. ಲಿಂಗನಮಕ್ಕಿ ಮತ್ತು ಸೂಪಾಗೆ ಹರಿದು ಬಂದ ಪ್ರಮಾಣವೂ ಅತ್ಯಲ್ಪ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜುಲೈನಲ್ಲಿ 92 ಟಿಎಂಸಿ ಅಡಿ ನೀರು ಕಾವೇರಿ ಕೊಳ್ಳದ ಜಲಾಶಯಗಳಿಗೆ ಹರಿದು ಬರಬೇಕು. ಜುಲೈನಲ್ಲಿ ವಾಡಿಕೆಯಷ್ಟು ಮಳೆ ಸುರಿದರೂ ಪ್ರಮುಖ ಜಲಾಶಯಗಳು ತುಂಬುವುದು ಕಷ್ಟ.‘ಚಮತ್ಕಾರ’ ಎನ್ನುವ ರೀತಿಯಲ್ಲಿ ಭಾರಿ ಮಳೆ ಸುರಿಸುವ ವಾತಾವರಣ ನಿರ್ಮಾಣವಾಗಿ ನಿರಂತರ ಐದಾರು ದಿನಗಳು ಮಳೆ ಸುರಿದರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು ಎಂದೂ ಹೇಳಿದರು.

ಮಳೆಯ ಕೊರತೆಯಿಂದ ಅಂತರ್ಜಲ ಪ್ರಮಾಣ ಶೇ 85 ರಷ್ಟು ಕುಸಿತವಾಗಿದೆ. ಇದು ಕಳೆದ 10 ವರ್ಷಗಳಲ್ಲೇ ಕಡಿಮೆ. ಸದ್ಯದ ಮಟ್ಟಿಗೆ ಇದು ಅತ್ಯಂತ ಗಂಭೀರ ಸ್ಥಿತಿ. ಮುಂದಿನ ಎರಡು ತಿಂಗಳು ಮಳೆ ಸುರಿದರೆ ಅಂತರ್ಜಲ ಪ್ರಮಾಣ ವೃದ್ಧಿಯಾಗಬಹುದು ಎಂದು ಅವರು ವಿವರಿಸಿದರು.

ಮಂಡ್ಯ ಭಾಗದಲ್ಲಿ ಬೇಸಿಗೆ ಬೆಳೆಗೆ ನೀರು ಕೇಳುತ್ತಿದ್ದಾರೆ. ಆದರೆ, ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಈ ವರ್ಷದ ಬೆಳೆಗೆ ಎಷ್ಟು ನೀರು ಬಿಡಬೇಕು ಎಂಬುದು ಆಗಸ್ಟ್‌ನಲ್ಲಿ ತೀರ್ಮಾನಿಸಲಾಗುವುದು. ಸೆಪ್ಟಂಬರ್‌ವರೆಗೆ ಬರುವ ಮಳೆ
ಯಿಂದ ಕುಡಿಯುವುದಕ್ಕೆ ಸಮಸ್ಯೆ ಆಗಲಾರದು, ಕೃಷಿಗೆ ಕಷ್ಟ ಎಂದು ಅವರು ಹೇಳಿದರು.

ಮೋಡ ಬಿತ್ತನೆಗೆ ಸಿಗದ ಕೇಂದ್ರದ ಅನುಮತಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ಬರದ ತೀವ್ರತೆ ಹೆಚ್ಚಾಗುತ್ತಿದ್ದರೂ ಮೋಡ ಬಿತ್ತನೆ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಮಳೆ ಕೊರತೆ ತೀವ್ರವಾದರೆ ಜೂನ್ ಅಂತ್ಯಕ್ಕೆ ಮೋಡ ಬಿತ್ತನೆ ಆರಂಭಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿತ್ತು. ಎರಡು ವರ್ಷಗಳಿಗೆ ಮೋಡ ಬಿತ್ತನೆ ಮಾಡಲು ಯೋಜನೆ ರೂಪಿಸಿದ್ದು, ₹88 ಕೋಟಿ ವೆಚ್ಚ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆಯನ್ನೂ ನೀಡಿದೆ.

ಈ ವರ್ಷ ₹45 ಕೋಟಿ ವೆಚ್ಚ ಮಾಡಲಾಗುತ್ತಿದೆ.ಮೋಡದ ಲಭ್ಯತೆಯನ್ನು ನೋಡಿಕೊಂಡು ಬೆಂಗಳೂರು ಹಾಗೂ ಹುಬ್ಬಳ್ಳಿ–ಧಾರವಾಡ ಭಾಗದಲ್ಲಿ ಮೋಡ ಬಿತ್ತನೆಗೆ ಉದ್ದೇಶಿಸಲಾಗಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಜುಲೈನಲ್ಲಿ ಸಮಯ ನಿಗದಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಪುಟ ಅನುಮೋದನೆ ನಂತರ ಟೆಂಡರ್ ಕರೆದಿದ್ದು, ‘ಕ್ಯಾತಿ ಕ್ಲೈಮೇಟ್ ಮಾಡಿಫಿಕೇಷನ್’ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಮೋಡ ಬಿತ್ತನೆಗೆ ವಿಮಾನಗಳನ್ನು ಬಳಸುವುದರಿಂದ ಕೇಂದ್ರ ಸರ್ಕಾರದ ಅನುಮತಿ ಕೋರಿದ್ದು,ಇನ್ನೂ ಸಿಕ್ಕಿಲ್ಲ. ಅನುಮತಿಗಾಗಿ ಅಧಿಕಾರಿಗಳು ದೆಹಲಿ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅನುಮತಿ ಸಿಕ್ಕ ನಂತರ ರಾಜ್ಯಕ್ಕೆ ವಿಮಾನಗಳು ಆಗಮಿಸಲಿವೆ. ನಂತರ ಚಟುವಟಿಕೆಗಳು ಆರಂಭವಾಗಬೇಕಿದೆ ಎಂದು ಪಂಚಾಯತ್ ರಾಜ್ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.