ADVERTISEMENT

ಮಳೆ: ಹಾಸನದಲ್ಲಿ ವ್ಯಕ್ತಿ ಸಾವು, ಮೈಸೂರು ಮಹಾರಾಣಿ ಕಾಲೇಜು ಕಟ್ಟಡ ಕುಸಿತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 21:12 IST
Last Updated 21 ಅಕ್ಟೋಬರ್ 2022, 21:12 IST
ಮೈಸೂರಿನ ಚಾಮುಂಡಿ ಬೆಟ್ಟದ ನಂದಿ ರಸ್ತೆ ಹಾಗೂ ತಡೆಗೋಡೆಯು ಶುಕ್ರವಾರ ಕುಸಿದಿದೆ
ಮೈಸೂರಿನ ಚಾಮುಂಡಿ ಬೆಟ್ಟದ ನಂದಿ ರಸ್ತೆ ಹಾಗೂ ತಡೆಗೋಡೆಯು ಶುಕ್ರವಾರ ಕುಸಿದಿದೆ   

ಮೈಸೂರು: ಮೈಸೂರು, ಹಾಸನದಲ್ಲಿ ಮಳೆ ಮುಂದುವರಿದಿದೆ. ಹಾಸನದ ಹರ್ಷ ಮಹಲ್ ರಸ್ತೆಯಲ್ಲಿ ಕಾಂಪೌಡ್‌ ಕುಸಿದು ವ್ಯಕ್ತಿಯೊಬ್ಬರು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಬೀದಿ ಬದಿಯಲ್ಲಿ ಹೇರ್‌ಪಿನ್, ಕ್ಲಿಪ್ ಮಾರುತ್ತಿದ್ದ ವಲ್ಲಭಬಾಯಿ ರಸ್ತೆಯ ಲೋಕೇಶ್ (50) ಮೃತರು. ಕಾಂಪೌಂಡ್ ಪಕ್ಕದಲ್ಲಿ ಮಲಗಿದ್ದರು. ಮಳೆಯಿಂದಾಗಿ ಕಾಂಪೌಂಡ್ ಕುಸಿದಿದೆ.

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪಾರಂಪರಿಕ ಕಟ್ಟಡ ಮಳೆಯಿಂದಾಗಿ ಶುಕ್ರವಾರ ಬೆಳಿಗ್ಗೆ ಕುಸಿದಿದ್ದು, ಭಾರಿ ಅನಾಹುತ ತಪ್ಪಿದೆ.

ADVERTISEMENT

ಅಲ್ಲಿ ರಸಾಯನ ವಿಜ್ಞಾನದ ಪ್ರಯೋಗಾಲಯ ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳು 10.30ರ ವೇಳೆಗೆ ಬರುವವರಿದ್ದರು. ಕೊಠಡಿಯಲ್ಲಿ ಬಿರುಕು ಮೂಡಿದ್ದನ್ನು 10.15ರ ಸುಮಾರಿಗೆ ಗಮನಿಸಿದ ವಿಭಾಗದ ಮುಖ್ಯಸ್ಥ ಕೆ.ಕೆ.ಪದ್ಮನಾಭ ಪ್ರಾಂಶುಪಾಲಡಾ.ಡಿ.ರವಿ ಗಮನಕ್ಕೆ ತಂದಿದ್ದರು. ಕೊಠಡಿಗೆ ಬಂದ ಪ್ರಾಂಶುಪಾಲರು ಬೀಗ ಹಾಕಿಸಿ, ಎಲೆಕ್ಟ್ರಿಕ್ ಸಂಪರ್ಕ ಕಡಿತಗೊಳಿಸಿದ್ದರು. ಎಲ್ಲರೂ ಮೊದಲ ಮಹಡಿಯ ಮೆಟ್ಟಿಲಿಳಿಯುತ್ತಿದ್ದಂತೆಯೇ ಪ್ರಯೋಗಾಲಯದ ಭಾಗವು ಕುಸಿದಿದೆ. ಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ.

‘ಪಾರಂಪರಿಕ ಕಟ್ಟಡದ ದುರಸ್ತಿ ಕಾಮಗಾರಿಯ ಭೂಮಿಪೂಜೆಯನ್ನು ಅ.22ರಂದು ಹಮ್ಮಿಕೊಳ್ಳಲಾಗಿತ್ತು. 4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಿರುಕುಗಳು ಹೆಚ್ಚಾಗಿದ್ದವು’ ಎಂದು ಪ್ರಾಂಶುಪಾಲ ಡಾ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘106 ವರ್ಷದ ಐತಿಹಾಸಿಕ ಕಟ್ಟಡ ಇದಾಗಿದೆ. ಪ್ರಯೋಗಾಲಯದಲ್ಲಿ ₹ 40 ಲಕ್ಷ ಮೌಲ್ಯದರಸಾಯನ ವಿಜ್ಞಾನ ಹಾಗೂ ಪ್ರಾಣಿ ವಿಜ್ಞಾನದ ಪರಿಕರಗಳಿದ್ದು, ಪ್ರತಿ ಬ್ಯಾಚ್‌ನಲ್ಲಿ30 ವಿದ್ಯಾರ್ಥಿನಿಯರು ಪ್ರಾಯೋಗಿಕ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು’ ಎಂದರು.

ಚಾಮುಂಡಿ ಬೆಟ್ಟದ ರಸ್ತೆ ಕುಸಿತ: ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಮತ್ತೆ ಎರಡು ಕಡೆಗಳಲ್ಲಿ ರಸ್ತೆ ಕುಸಿದಿದೆ. ಕಳೆದ ವರ್ಷ ಕುಸಿದಿದ್ದ ಸ್ಥಳದಿಂದ 500 ಮೀಟರ್‌ ದೂರದಲ್ಲಿ ಮತ್ತೆ ಕುಸಿತ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.