ADVERTISEMENT

ಭಾರಿ ಮಳೆಗೆ 64 ಜನರ ಸಾವು: ಆರ್‌.ಅಶೋಕ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 13:41 IST
Last Updated 4 ಆಗಸ್ಟ್ 2022, 13:41 IST
ಕಂದಾಯ ಸಚಿವ ಆರ್‌.ಅಶೋಕ್‌
ಕಂದಾಯ ಸಚಿವ ಆರ್‌.ಅಶೋಕ್‌   

ಕೆ.ಆರ್‌.ಪೇಟೆ (ಮಂಡ್ಯ ಜಿಲ್ಲೆ): ‘ಜೂನ್‌ 1ರಿಂದ ಆಗಸ್ಟ್‌ 4ರವರೆಗೆ ಸುರಿದಿರುವ ಭಾರಿ ಮಳೆಗೆ ರಾಜ್ಯದಾದ್ಯಂತ 64 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಯಿಂದ 14 ಜಿಲ್ಲೆಗಳಿಗೆ ತೊಂದರೆಯಾಗಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಗುರುವಾರ ತಿಳಿಸಿದರು.

ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ‘14,956 ಜನರು ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ, 608 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ, 2,450 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಮುಂಜಾಗೃತಾ ಕ್ರಮವಾಗಿ ಈಗಾಗಲೇ 8,057 ಜನರನ್ನು ಸ್ಥಳಾಂತರ ಮಾಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ 6,933 ಜನರು ಆಶ್ರಯ ಪಡೆದಿದ್ದಾರೆ’ ಎಂದರು.

‘ರಾಜ್ಯದಲ್ಲಿ 18,280 ಹೆಕ್ಟೇರ್‌ ಕೃಷಿ ಭೂಮಿ ಮಳೆಯಿಂದ ಹಾನಿಯಾಗಿದೆ. 4,500 ತೋಟಗಾರಿಕೆ ಇಲಾಖೆ ಬೆಳೆ ನಾಶವಾಗಿದೆ 1,392 ಕಿ.ಮೀ ರಸ್ತೆಗೆ ಹಾನಿಯುಂಟಾಗಿದೆ. 299 ಸೇತುವೆ, 4,224 ಶಾಲೆ, 61 ಕೆರೆಗಳಿಗೆ ತೊಂದರೆಯಾಗಿದೆ’ ಎಂದರು.

ADVERTISEMENT

‘ಜನರು ಸಂಕಷ್ಟದಲ್ಲಿದ್ದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜನ್ಮದಿನ ಆಚರಣೆ ಮಾಡಿ ಕಾಂಗ್ರೆಸ್‌ ಮುಖಂಡರು ಸಂಭ್ರಮಿಸಿದ್ಧಾರೆ. ಬಿಜೆಪಿ ಕಾರ್ಯಕರ್ತ ಸತ್ತಾಗ ನಾವು ಸಾಧನಾ ಸಮಾವೇಶವನ್ನೇ ರದ್ದು ಮಾಡಿದೆವು. ಇದರಿಂದ ಜನರ ಪರ ಇರುವವರು ಯಾರು ಎಂಬುದು ತಿಳಿಯುತ್ತದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಹಾವು– ಮುಂಗುಸಿಯಾಗಿದ್ದು ಅವರು ಈ ಜನ್ಮದಲ್ಲಿ ಒಂದಾಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಎಚ್‌.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಕೈ ಎತ್ತಿ ಜೋಡೆತ್ತು ಎಂದು ಹೇಳಿದ್ದರು. ಆದರೆ ಅವರ ಜೋಡೆತ್ತು ಅಲ್ಲ, ಕುಂಟೆತ್ತು ಆಗಿದ್ದಾರೆ. ಸಿದ್ದರಾಮಯ್ಯ ಅವರು ಡಿಕೆಶಿ ಅವರನ್ನು ಬಲವಂತದಿಂದ ಆಲಿಂಗಿಸಿಕೊಂಡಿದ್ದಾರೆ. ರಾಹುಲ್‌ ಗಾಂಧಿ ಹೇಳಿದ ಪಾಠ ಕೇಳಿದ್ದಾರೆ. ಜನರು ಕಷ್ಟದಲ್ಲಿದ್ದಾಗ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಮುಖಂಡರಿಗೆ ಬುದ್ಧಿ ಹೇಳಬೇಕಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.