ADVERTISEMENT

ರಾಜ್ಯದಾದ್ಯಂತ ಮಳೆ: ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 6:37 IST
Last Updated 19 ನವೆಂಬರ್ 2021, 6:37 IST
ಹುಬ್ಬಳ್ಳಿಯಲ್ಲಿ ಸುರಿಯುತ್ತಿರುವ ಮಳೆಯಲ್ಲೇ ಸಾಗಿದ ಜನ
ಹುಬ್ಬಳ್ಳಿಯಲ್ಲಿ ಸುರಿಯುತ್ತಿರುವ ಮಳೆಯಲ್ಲೇ ಸಾಗಿದ ಜನ   

ಬೆಂಗಳೂರು:ಸತತವಾಗಿ ಮಳೆ‌ ಸುರಿಯುತ್ತಿರುವ ಕಾರಣ ವಿಜಯನಗರ,ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗಜಿಲ್ಲೆಗಳಲ್ಲಿ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ಶುಕ್ರವಾರ (ನ. 19) ರಜೆ ಘೋಷಿಸಲಾಗಿದೆ.

ದಿನವಿಡೀ ಮಳೆಯಾಗಲಿದೆ ಎಂದುಹವಾಮಾನ ಇಲಾಖೆಮುನ್ಸೂಚನೆ ನೀಡಿದ್ದು, ಭತ್ತ ಸೇರಿದಂತೆ ಕಟಾವಿಗೆ ಬಂದಿರುವ ಇತರೆ ಬೆಳೆಗಳಿಗೆ ತೀವ್ರ ಹಾನಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಬಹುತೇಕ ಮಕ್ಕಳು ಬೆಳಿಗ್ಗೆ ಶಾಲೆಗೆ ತೆರಳಿದ ಬಳಿಕ ರಜೆ ಘೋಷಣೆ ಮಾಡಲಾಗಿದೆ. ಈಗ ಮಳೆ ಸುರಿಯುತ್ತಿರುವುದರಿಂದ ಮಕ್ಕಳು ಮರಳಿ ಮನೆಸೇರಲು ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳ‌ ಹಿತದೃಷ್ಟಿಯಿಂದ ಇಂದು(ನ.19) ಮತ್ತು ನಾಳೆ(ನ.20) ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.ಎಲ್.ಕೆ.ಜಿ, 1ರಿಂದ‌ 10ನೇ ತರಗತಿವರೆಗಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ರಜೆ ಘೋಷಣೆ ಮಾಡಿದ ದಿನದ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದಿನ‌ ದಿನಗಳಲ್ಲಿ‌ ಸರಿದೂಗಿಸುವಂತೆ ಸೂಚಿಸಲಾಗಿದೆ ಎಂದುಬಳ್ಳಾರಿ ಜಿಲ್ಲಾಧಿಕಾರಿಪವನಕುಮಾರ್ ಮಾಲಪಾಟಿ ತಿಳಿಸಿದ್ದಾರೆ.

ಮಳೆ ಕಾರಣದಿಂದ ಶುಕ್ರವಾರ ಮತ್ತು ಶನಿವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ. ಹಾಗೆಯೇ,ಶಿಥಿಲಗೊಂಡಿರುವ ಮನೆಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಗತ್ಯ ಇರುವ ಕಡೆ ಕಾಳಜಿ ಕೇಂದ್ರ ತೆರೆಯುವಂತೆಯೂ ಆದೇಶಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಬೆಳಿಗ್ಗೆಯಿಂದಮಳೆ
ಹುಬ್ಬಳ್ಳಿ:
ನಗರದಲ್ಲಿ ಬೆಳಿಗ್ಗೆಯಿಂದ ಜಿಟಿ ಜಿಟಿಯಾಗಿ ಮಳೆ ಸುರಿಯುತ್ತಿದೆ.

ಬೆಳಗಿನ ಜಾವದಿಂದಲೂಮೋಡಕವಿದ ವಾತಾವರಣವಿದ್ದು, ಕೆಲ ಹೊತ್ತು ಜಿಟಿಜಿಟಿ, ಇನ್ನೂ ಕೆಲ ಬಾರಿ‌ ಜೋರಾಗಿ ಮಳೆ ಬರುತ್ತಿದೆ. ಇದರಿಂದಾಗಿಕೆಲಸಕ್ಕೆ ಹೋಗುವವರು, ಹಾಲು ಹಾಕುವ ಹುಡುಗರು, ಪತ್ರಿಕೆ ಹಂಚುವವರು ಮಳೆಯಲ್ಲಿ ತೋಯ್ದು ನಿತ್ಯದ ಕೆಲಸ ಮಾಡಬೇಕಾಯಿತು.

ಆವರಣ ಜಲಾವೃತ: ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣ ಮಳೆಯ‌ ನೀರಿನಿಂದ ಜಲಾವೃತವಾಗಿದೆ. ತರಗತಿಗಳಿಗೆ ಒಳಹೋಗುವ ಮೆಟ್ಟಿಲಿನ ತನಕವೂ ನೀರು ನಿಂತುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.