ADVERTISEMENT

ಮಳೆ ಸಾಧ್ಯತೆ: ಎಂಟು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’

ಬೆಳೆಗಳಿಗೆ ಹಾನಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 18:27 IST
Last Updated 2 ಡಿಸೆಂಬರ್ 2019, 18:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಡಿಸೆಂಬರ್‌ 3 ರಂದು ಗುಡುಗು ಸಹಿತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ಈ ಜಿಲ್ಲೆಗಳಲ್ಲಿ ಮಂಗಳವಾರದವರೆಗೆ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.ಉಳಿದೆಡೆ ಗುಡುಗು, ಸಿಡಿಲು ಹೆಚ್ಚಾಗಿರಲಿದೆ. ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಕಡಿಮೆ ಇರಲಿದೆಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಳೆ ಹಾನಿ ಸಾಧ್ಯತೆ: ‘ರಾಗಿ, ಭತ್ತ ಇತ್ಯಾದಿ ಬೆಳೆಗಳನ್ನು ಕಟಾವು ಮಾಡಿ ಹಾಗೇ ಬಿಟ್ಟಿದ್ದರೆ ಅವು ನಾಶವಾಗುವ ಸಾಧ್ಯತೆ ಇದೆ. ಕಟಾವನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡಬಹುದು. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿದು ಚಂಡಮಾರುತ ಬೀಸುವ ಸಾಧ್ಯತೆ ಇದೆ. ಅಲ್ಲದೆ, ಕೇರಳ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಬೀಸುವುದರಿಂದ ಮುಂದಿನ ಮೂರರಿಂದ ನಾಲ್ಕು ದಿನಗಳು ಮಳೆ ಆಗಬಹುದು’ ಎಂದು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಕೆ.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ADVERTISEMENT

ಅಲ್ಲಲ್ಲಿ ಮಳೆ:(ಮಂಗಳೂರು ವರದಿ): ದಕ್ಷಿಣ ಕನ್ನಡಜಿಲ್ಲೆಯಲ್ಲಿ ಸೋಮವಾರ ಮೋಡ ಕವಿದ ವಾತಾವರಣವಿತ್ತು. ಅಲ್ಲಲ್ಲಿ ಮಳೆಯಾಗಿದೆ. ಮಂಗಳೂರು ನಗರ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆಯಲ್ಲಿ ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲೂ ಇಡೀ ದಿವಸ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಅಲ್ಲಲ್ಲಿ ತುಂತುರು ಸುರಿದಿದೆ.

ಬೆಳಕೊಯ್ಲಿಗೆ ತೊಂದರೆ: (ಚಿಕ್ಕಮಗಳೂರು): ಕಾಫಿನಾಡಿನ ಚಿಕ್ಕಮಗಳೂರು, ಕಡೂರು,ಕೊಪ್ಪ, ಮೂಡಿಗೆರೆ, ಗಿರಿಶ್ರೇಣಿ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಶೀತಮಯವಾಗಿತ್ತು. ಮಳೆ ಕೃಷಿಕರಲ್ಲಿ ಆತಂಕ ಮೂಡಿಸಿದೆ. ಅಡಿಕೆ ಕೊಯ್ಲಿಗೆ ಅಡ್ಡಿಯಾಗಿದೆ. ಕಾಫಿ, ಕಾಳು ಮೆಣಸು, ಭತ್ತ, ಇತರ ಬೆಳೆಗಳಿಗೆ ತೊಡಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.