ADVERTISEMENT

ಮಲೆನಾಡು, ಕರಾವಳಿ ಸೇರಿ ವಿವಿಧೆಡೆ ಮಳೆ

ಮಳೆ ಗಾಳಿಗೆ ನೆಲಕ್ಕಚ್ಚಿದ ಭತ್ತದ ಪೈರು, ಅಡಿಕೆ ಮರಗಳು

​ಪ್ರಜಾವಾಣಿ ವಾರ್ತೆ
Published 4 ಮೇ 2020, 2:53 IST
Last Updated 4 ಮೇ 2020, 2:53 IST
ಬಾಳೆಹೊನ್ನೂರು ಸಮೀಪದ ಶಿವನಗರದಲ್ಲಿ ಭಾನುವಾರ ಗಾಳಿಗೆ ಮರ ಬಿದ್ದು ವರ್ಕ್‌ಶಾಪ್‌ ಜಖಂಗೊಂಡಿದೆ.
ಬಾಳೆಹೊನ್ನೂರು ಸಮೀಪದ ಶಿವನಗರದಲ್ಲಿ ಭಾನುವಾರ ಗಾಳಿಗೆ ಮರ ಬಿದ್ದು ವರ್ಕ್‌ಶಾಪ್‌ ಜಖಂಗೊಂಡಿದೆ.   

ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿಯ ಜಿಲ್ಲೆಗಳು, ಚಿತ್ರದುರ್ಗ, ದಾವಣಗೆರೆ, ಧಾರವಾಡ ಜಿಲ್ಲೆಗಳ ಕೆಲವೆಡೆ ಭಾನುವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ವಿವಿಧೆಡೆ ಬಾಳೆ, ಭತ್ತದ ಬೆಳೆಗೆ ಹಾನಿಯಾಗಿದೆ.

ಕಳಸದಲ್ಲಿ ಮಳೆ, ಗಾಳಿಗೆ ಬಾಳೆ ಬೆಳೆ ಹಾನಿಗೊಂಡಿದ್ದರೆ, ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಹಲವು ತೋಟಗಳಿಗೆ ಹಾನಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶ ಹಾಗೂ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಮತ್ತು ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ಮಳೆ ಸುರಿದಿದೆ.

ADVERTISEMENT

ಬಾಳೆಹೊನ್ನೂರಿನಲ್ಲಿ ಗುಡುಗು ಹಾಗೂ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟ್ಟಿಗೆ ಸೀಗೋಡು ಶಿವನಗರದಲ್ಲಿ ವರ್ಕ್‌ಶಾಪ್‌ ಮೇಲೆ ಮರ ಉರುಳಿದೆ. ಕಳಸದಲ್ಲಿ ಅರ್ಧ ಗಂಟೆ ಬೀರುಸುಗಾಳಿಯೊಂದಿಗೆ ಮಳೆ ಸುರಿಯಿತು. ಅಲ್ಲಲ್ಲಿ ಮರದ ರೆಂಬೆಗಳು, ಬಾಳೆ ಗಿಡಗಳು ನೆಲಕಚ್ಚಿದವು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಹಲವು ಮನೆ, ತೋಟಗಳಿಗೆ ಹಾನಿಯಾಗಿದೆ.

ಪುತ್ತೂರು ನಗರ, ಕೊಯಿಲ, ರಾಮಕುಂಜ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳು ವಿದ್ಯುತ್ ತಂತಿಯ ಮೇಲೆ ಉರುಳಿದ್ದು, ವಿದ್ಯುತ್‌ ಪೂರೈಕೆ ವ್ಯತ್ಯಯಗೊಂಡಿದೆ.

ಹೊಸದುರ್ಗ ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದ್ದರೆ, ಭರಮಸಾಗರದಲ್ಲಿ ಬಿರುಗಾಳಿ, ಗುಡುಗು ಸಹಿತ ತುಂತುರು ಮಳೆಯಾಯಿತು. ದಾವಣಗೆರೆಯಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆ ಸುರಿದಿದೆ.ಉಚ್ಚಂಗಿದುರ್ಗದ ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ.

ನ್ಯಾಮತಿ ತಾಲ್ಲೂಕಿನಲ್ಲಿ ಮಳೆ, ಗಾಳಿಗೆ ಭತ್ತದ ಪೈರು, ಅಡಿಕೆ ಮರಗಳು ನೆಲಕಚ್ಚಿವೆ. ಹಲವು ಮನೆಗಳ ತಗಡಿನ ಚಾವಣಿಗಳು ಹಾರಿವೆ. ಸಾಸ್ವೇಹಳ್ಳಿಯಲ್ಲಿ ಭತ್ತದ ಪೈರು ನೆಲ ಕಚ್ಚಿದೆ.ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಭಾನುವಾರ ಗಾಳಿ, ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ಸಿದ್ದಾಪುರ ಸೇರಿ ವಿವಿಧೆಡೆ ಮಳೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮರಗಳು ಮುರಿದು ಬಿದ್ದು ವಿದ್ಯುತ್ ವ್ಯತ್ಯಯಗೊಂಡಿತು. ಹಾವೇರಿ ಜಿಲ್ಲೆಯ ವಿವಿಧೆಡೆ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.