ADVERTISEMENT

ರಾಜ್ಯ ರೈತ ಸಂಘದಲ್ಲಿ ಮತ್ತೊಮ್ಮೆ ಬಿರುಕು

ಕೆಸರೆರಚಾಟದಲ್ಲಿ ತೊಡಗಿದ ಮುಖಂಡರು

ಎಂ.ಎನ್.ಯೋಗೇಶ್‌
Published 15 ಫೆಬ್ರುವರಿ 2019, 19:08 IST
Last Updated 15 ಫೆಬ್ರುವರಿ 2019, 19:08 IST
.
.   

ಮಂಡ್ಯ: ಕೆ.ಎಸ್‌.ಪುಟ್ಟಣ್ಣಯ್ಯ ಮೃತಪಟ್ಟು ವರ್ಷಕ್ಕೆ ಸರಿಯಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಲ್ಲಿ ಬಿರುಕು ಮೂಡಿದೆ. ಅಧ್ಯಕ್ಷಗಾದಿಗೆ ಪೈಪೋಟಿ ಆರಂಭವಾಗಿದೆ.

ಸಂಘದ ಅಧ್ಯಕ್ಷರಾಗಿ ಬಡಗಲಪುರ ನಾಗೇಂದ್ರ ನೇಮಕವಾಗುತ್ತಲೇ ಸಂಘಟನೆಯಲ್ಲಿದ್ದ ಬಣ ರಾಜಕಾರಣ ಬೀದಿಗೆ ಬಂದಿದೆ. ನಾಗೇಂದ್ರ ಆಯ್ಕೆಗೆ ನಂಜುಂಡಸ್ವಾಮಿ ಮಕ್ಕಳಾದ ಪಚ್ಚೆ, ಚುಕ್ಕಿ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ಹೆಜ್ಜೆ ಮುಂದೆ ಹೋದ ಪಚ್ಚೆ
ಅವರು, ನಾಗೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಸಂಘದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದ ಪಚ್ಚೆ ಅವರು ಅಧ್ಯಕ್ಷರನ್ನು ಉಚ್ಛಾಟಿಸಲು ಹೇಗೆ ಸಾಧ್ಯ? ಉಚ್ಛಾಟನೆ ಹೆಸರಿನಲ್ಲಿ ಹುಚ್ಚಾಟ ಆಡುತ್ತಿದ್ದಾರೆ ಎಂದು ನಾಗೇಂದ್ರ ತಿರುಗೇಟು ನೀಡಿದ್ದಾರೆ.

ರೈತ ಸಂಘದ ಅಧ್ಯಕ್ಷರಾಗಿದ್ದ ಕೆ.ಟಿ.ಗಂಗಾಧರ್‌ ಅನಾರೋಗ್ಯ ಕಾರಣ ನೀಡಿ ಹೊಸ ಅಧ್ಯಕ್ಷರ ನೇಮಕಾತಿಗೆ ಹಸಿರು ನಿಶಾನೆ ತೋರಿದರು. ಗಂಗಾಧರ್‌ ಸೇರಿ ಜಿಲ್ಲಾ ಘಟಕಗಳ ಪದಾಧಿಕಾರಿಗಳ ಅವಧಿ ಏಳು ತಿಂಗಳು ಉಳಿದಿತ್ತು. ನಿಧಾನವಾಗಿ ಹೊಸ ಅಧ್ಯಕ್ಷರ ಆಯ್ಕೆ, ಜಿಲ್ಲಾಘಟಕಗಳ ಪುನರ್‌ ರಚನೆಗೆ ಚಿಂತನೆ ನಡೆದಿತ್ತು. ಆದರೆ ರಾಜ್ಯ ಸಮಿತಿ ಏಕಾಏಕಿ ಬಡಗಲಪುರ ನಾಗೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಇದರ ವಿರುದ್ಧ ಬಂಡೆದ್ದ ಪಚ್ಚೆ, ಹೊಸ ಅಧ್ಯಕ್ಷರನ್ನೇ ಉಚ್ಛಾಟನೆ ಮಾಡಿದರು. ಸದ್ಯ ಎರಡು ಗುಂಪು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದು, ಸಂಘ ಮತ್ತೆ ಹೋಳಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ADVERTISEMENT

ಒಡಕು ಇದೇ ಮೊದಲಲ್ಲ: ರೈತ ಸಂಘದಲ್ಲಿ ಬಿರುಕು ಮೂಡಿರುವುದು ಇದೇ ಮೊದಲಲ್ಲ. ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ನಂಜುಂಡಸ್ವಾಮಿ ಅವರು ಚಾಮರಾಜನಗರ ಬಳಿ ಅಮೃತಭೂಮಿ ಹೆಸರಿನಲ್ಲಿ ಟ್ರಸ್ಟ್‌ ಮಾಡಿದ್ದರು. ಟ್ರಸ್ಟ್ ಸ್ವಂತಕ್ಕೆ ಸೇರಿದ್ದು ಎಂದಾಗ ಕೆ.ಎಸ್‌.ಪುಟ್ಟಣ್ಣಯ್ಯ ಹಾಗೂ ಬೆಂಬಲಿಗರು ಸಂಘ ತೊರೆದು ಹೊರ ಬಂದಿದ್ದರು. ಪುಟ್ಟಣ್ಣಯ್ಯ ಬಣದಲ್ಲಿ ಎಚ್‌.ಆರ್‌.ಬಸವರಾಜಪ್ಪ, ಸುನಂದಾ ಜಯರಾಂ ಹಾಗೂ ನಂಜುಂಡಸ್ವಾಮಿ ಬಣದಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌, ಕೆ.ಟಿ.ಗಂಗಾಧರ್‌ ಇದ್ದರು.

ನಂಜುಂಡಸ್ವಾಮಿ ಮೃತಪಟ್ಟ ನಂತರ ಎರಡೂ ಸಂಘಟನೆಗಳು ಒಂದಾದವು. ಸರ್ವೋದಯ ಕರ್ನಾಟಕ ರಾಜ
ಕೀಯ ಪಕ್ಷವೂ ರಚನೆಯಾಯಿತು. ಪುಟ್ಟಣ್ಣಯ್ಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದರು. ರೈತ ಸಂಘಕ್ಕೆ ಬಸವರಾಜ ತಂಬಾಕೆ
ಅಧ್ಯಕ್ಷರಾದರು. ಪಕ್ಷದಲ್ಲಿ ಮನ್ನಣೆ ಸಿಗದೆ ಪುಟ್ಟಣ್ಣಯ್ಯ, ಏಕಾಏಕಿ ತಾನೇ ರೈತ ಸಂಘದ ಅಧ್ಯಕ್ಷ ಎಂದು ಘೋಷಿಸಿ
ಕೊಂಡರು. ಇದನ್ನು ವಿರೋಧಿಸಿದ ಕೆಲವರು ಕೋಡಿಹಳ್ಳಿ ಚಂದ್ರಶೇಖರ್‌ ಅಧ್ಯಕ್ಷತೆಯಲ್ಲಿ ಹೊಸ ರೈತಸಂಘ ಕಟ್ಟಿ ಹೊರ
ನಡೆದರು. ಬಾಬಾಗೌಡಪಾಟೀಲ, ಲಕ್ಷ್ಮಿನಾರಾಯಣಗೌಡ ಅವರೂ ಒಂದೊಂದು ರೈತಸಂಘ ಕಟ್ಟಿದ್ದರು. ಇತ್ತೀಚೆಗೆ ರೈತ
ಸಂಘ ಮೂಲ ಸಂಘಟನೆ, ಅಖಂಡ ಕರ್ನಾಟಕ ರೈತಸಂಘವೂ ರಚನೆಯಾಗಿವೆ. ‘ನಂಜುಂಡಸ್ವಾಮಿ, ಹಾಗೂ ಪುಟ್ಟ
ಣ್ಣಯ್ಯ ಅವರು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಬೇರೆಬೇರೆಯಾಗಿದ್ದರು ಆದರೆ ಈಗ ನಾಗೇಂದ್ರ ಹಾಗೂ ಪಚ್ಚೆ
ನಡುವಿನ ವೈಯಕ್ತಿಕ ವಿಚಾರಕ್ಕೆ ರೈತ ಸಂಘವನ್ನು ಎಳೆದು ತಂದಿದ್ದಾರೆ’ ಎಂದು ಮುಖಂಡರೊಬ್ಬರು ತಿಳಿಸಿದರು.

ಜೆಡಿಎಸ್‌ ಮೇಲೆ ಆರೋಪವೇಕೆ?

ಕೆ.ಟಿ.ಗಂಗಾಧರ್‌ ಏಕಾಏಕಿ ಸಂಘದಿಂದ ದೂರ ಉಳಿಯಲು ಜೆಡಿಎಸ್‌ ಪ್ರಭಾವವಿದೆ ಎಂದು ಬಡಗಲಪುರ ನಾಗೇಂದ್ರ ಆರೋಪಿಸುತ್ತಾರೆ. ಬೆಳಗಾವಿ ಅಧಿವೇಶನದ ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಹಿಳಾ ಹೋರಾಟಗಾರರೊಬ್ಬರನ್ನು ‘ಎಲ್ಲಿ ಮಲಗಿದ್ದೆಯಮ್ಮ’ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿತ್ತು. ಕ್ಷಮೆ ಯಾಚಿಸಬೇಕು ಎಂದು ಸಂಘ ಒತ್ತಾಯ ಮಾಡುತ್ತಿತ್ತು.

ಕಬ್ಬು ಬೆಳೆಗಾರರ ಹೋರಾಟದಲ್ಲಿ ರೈತಸಂಘದ ಪದಾಧಿಕಾರಿಗಳನ್ನು ಮಾತುಕತೆಗೆ ಮುಖ್ಯಮಂತ್ರಿ ಕರೆದಿದ್ದರು. ಕ್ಷಮೆ ಕೋರುವವರೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ ಗಂಗಾಧರ್‌ ಮಾತುಕತೆಗೆ ತೆರಳಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಅಧ್ಯಕ್ಷರು ಜೆಡಿಎಸ್‌ ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.