ADVERTISEMENT

‘ನೀರು, ಗಾಳಿ ಚುನಾವಣೆ ವಿಷಯಗಳಾಗಲಿ’

ರಾಜಕೀಯ ಪಕ್ಷಗಳದ್ದು ಮತ ಗಳಿಕೆ ಪ್ರಣಾಳಿಕೆ: ರಾಜೇಂದ್ರ ಸಿಂಗ್‌ ಪ್ರಹಾರ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 20:15 IST
Last Updated 15 ಏಪ್ರಿಲ್ 2019, 20:15 IST
ರಾಜೇಂದ್ರ ಸಿಂಗ್‌
ರಾಜೇಂದ್ರ ಸಿಂಗ್‌   

ಬೆಂಗಳೂರು: ‘ಯಾವ ರಾಜಕೀಯ ಪಕ್ಷಗಳೂ ತಮ್ಮ ಪ್ರಣಾಳಿಕೆಗಳಲ್ಲಿ ಜೀವಜಲ, ಪ್ರಾಣವಾಯು ಹಾಗೂ ಪರಿಸರದ ಅಂಶಗಳ ಕುರಿತು ಉಲ್ಲೇಖಿಸಿಲ್ಲ’ ಎಂದು ಜಲತಜ್ಞ ರಾಜೇಂದ್ರ ಸಿಂಗ್ ಬೇಸರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮತ ಗಳಿಸಲು ಅನುಕೂಲವಾಗುವ ತಂತ್ರಗಳನ್ನು ಇಟ್ಟುಕೊಂಡು ರಾಜಕಾರಣಿಗಳು ಪ್ರಣಾಳಿಕೆ ತಯಾರಿಸುತ್ತಾರೆ. ಈ ಮೂಲಕ ಜನರನ್ನುದುರಾಸೆಗೆ ದೂಡುತ್ತಾರೆ. ಅದರಿಂದ ಏನು ಪ್ರಯೋಜನ. ಬದಲಾಗಿನೀರು, ಗಾಳಿ ಹಾಗೂ ಪರಿಸರ ಚುನಾವಣೆ ವಿಷಯವಾಗಬೇಕು’ ಎಂದು ಹೇಳಿದರು.

‘ಜನ ಚಳುವಳಿಯ ಭಾಗವಾಗಿ ಸಮಾನ ಮನಸ್ಕರೆಲ್ಲ ಸೇರಿಜನ ಪ್ರಣಾಳಿಕೆಯನ್ನು ತಯಾರಿಸುತ್ತಿದ್ದೇವೆ. ಅದು ರಾಷ್ಟ್ರಮಟ್ಟದಲ್ಲಿ ಬಿಡುಗಡೆಯಾಗಲಿದೆ. ಮುಂದಿನ ದಿನಗಳಲ್ಲಿ ಅದರ ಕನ್ನಡ ಅವತರಣಿಕೆಯನ್ನೂ ಬಿಡುಗಡೆ ಮಾಡಲಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ನದಿ ವಿವಾದವನ್ನು ಬಗೆಹರಿಸುವ ಬದಲಾಗಿ ಅದನ್ನು ಜೀವಂತವಾಗಿಡಲು ರಾಜಕಾರಣಿಗಳು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪ್ರಸ್ತುತ 16 ರಾಜ್ಯಗಳ362 ಜಿಲ್ಲೆಗಳು ಜಲಬಿಕ್ಕಟ್ಟು ಎದುರಿಸುತ್ತಿವೆ. ದೇಶದ ಶೇ 90ರಷ್ಟು ನದಿಗಳು ಬೇಸಿಗೆಯಲ್ಲಿ ಸಂಪೂರ್ಣವಾಗಿ ಬತ್ತಿ ಹೋಗಿ, ಮಳೆಗಾಲದಲ್ಲಿ ಮಾತ್ರ ಹರಿಯುತ್ತವೆ. ಅವುಗಳನ್ನುರಕ್ಷಿಸಬೇಕಾದ ಅಗತ್ಯವಿದೆ. ಅಲ್ಲದೆ, ರೈತರು ಮಳೆ ಆಧಾರಿತ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ರಾಜಸ್ಥಾನದಲ್ಲಿ ನದಿ ಸಂಸತ್‌ ನಡೆಸಲಾಯಿತು. ಅದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿಯೂ ಅದನ್ನು ಮಾಡುವ ಇರಾದೆ ಇದೆ’ ಎಂದು ತಿಳಿಸಿದರು.

‘ಜಲಸಂಪನ್ಮೂಲದ ಉಳಿವಿಗೆ ಸುಸ್ಥಿರ ನಿಯಮಗಳನ್ನು ಅಳವಡಿಸಿಕೊಳ್ಳಲು ಪಡಿಪಾಟಲು ‍ಪ‍ಡಬೇಕಾಯಿತು. ಈ ವೇಳೆ ಬಹಳ ನೋವು ಅನುಭವಿಸಿದ್ದೇನೆ. ಸರ್ಕಾರ ನನ್ನ ವಿರುದ್ಧ 377 ಪ್ರಕರಣಗಳನ್ನು ದಾಖಲಿಸಿದೆ. ಹಟ ಬಿಡದೆ ಹೋರಾಡಿದ್ದಕ್ಕಾಗಿ ಅಲ್ಲಿಯ ಜಲ ಸಂಪನ್ಮೂಲ ಕಾಯ್ದೆ ಬದಲಾಯಿಸಲಾಯಿತು. ಅದೇ ಮಾದರಿಯಲ್ಲಿ ಕರ್ನಾಟದಲ್ಲಿಯೂ 2005ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.