ADVERTISEMENT

ಲಕ್ಷ್ಮಣರೇಖೆ ದಾಟಿರುವ ರಮೇಶ ಜಾರಕಿಹೊಳಿ: ಎಂ.ಬಿ. ಪಾಟೀಲ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 15:43 IST
Last Updated 2 ಜೂನ್ 2019, 15:43 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಳಗಾವಿ: ‘ರೆಬೆಲ್‌ ಆಗಿರುವ ಗೋಕಾಕದ ರಮೇಶ ಜಾರಕಿಹೊಳಿ ಈಗಾಗಲೆ ಲಕ್ಷ್ಮಣ ರೇಖೆ ದಾಟಿದ್ದಾರೆ. ಅವರ ಮನವೊಲಿಸುವ ಪ್ರಯತ್ನದ ಬಗ್ಗೆ ಪಕ್ಷ ನಿರ್ಧರಿಸುತ್ತದೆ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಸಾಂಬ್ರಾ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಎಲ್ಲದಕ್ಕೂ ಇತಿ–ಮಿತಿ ಇರುತ್ತದೆ. ಲಕ್ಷ್ಮಣರೇಖೆ ದಾಟಿದವರ ವಿರುದ್ಧ ಪಕ್ಷದಿಂದ ಅನಿವಾರ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

‘ನನಗೆ ಅವರು ಒಳ್ಳೆಯ ಸ್ನೇಹಿತ. ಅವರಿಗಿಂತಲೂ ಸತೀಶ ಜಾರಕಿಹೊಳಿ ಆತ್ಮೀಯರು. ರಮೇಶಗೆ ಇಂಧನ ಖಾತೆ ನೀಡುವ ಬಗ್ಗೆ ನನಗೆ ಗೊತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಣಯವಾಗಿಲ್ಲ. ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿದ್ದೇವೆ. ಕಾಂಗ್ರೆಸ್‌ನ ಅತೃಪ್ತ ಶಾಸಕರ ಮನವೊಲಿಸುವ ಕಾರ್ಯವನ್ನು ಮುಖ್ಯಮಂತ್ರಿ ಮಾಡಿದರೆ ತಪ್ಪೇನಿಲ್ಲ’ ಎಂದರು.

ADVERTISEMENT

‘ನಮ್ಮ ಸರ್ಕಾರ 5 ವರ್ಷಗಳವರೆಗೆ ಸುಭದ್ರವಾಗಿರಲಿದೆ. ಬಿಜೆಪಿ ಯಾವ ಆಪರೇಷನ್ ಕೂಡ ನಡೆಯುವುದಿಲ್ಲ. ಈ ಹಿಂದೆ ಪ್ರಯತ್ನ ಮಾಡಿದ ಆ ಪಕ್ಷದವರಿಗೆ ಮುಖಭಂಗವಾಗಿದೆ. ಮುಂದೆಯೂ ಆಗುತ್ತದೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.