ADVERTISEMENT

ಯುವತಿ‌ ನಮಗೇ ಸಿಕ್ಕಿಲ್ಲ, ಸಿಆರ್‌ಪಿಸಿ 164 ಹೇಗೆ?: ನ್ಯಾಯಾಲಯಕ್ಕೆ ತನಿಖಾಧಿಕಾರಿ

ಸಿ.ಡಿ. ಪ್ರಕರಣ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 7:04 IST
Last Updated 30 ಮಾರ್ಚ್ 2021, 7:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಿ.ಡಿ. ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಯುವತಿ ವಿಚಾರಣೆ ನಡೆಸಲು ಕೋರಿ ತನಿಖಾಧಿಕಾರಿಯೇ ನ್ಯಾಯಾಲಯಕ್ಕೆ ಇದೀಗ‌ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಲಯದಲ್ಲಿ ಸಿಆರ್‌ಪಿಸಿ 164 ಅಡಿ ಯುವತಿಯ ಹೇಳಿಕೆ ದಾಖಲಿಸಲು ಕೋರಿ, ಯುವತಿ ಪರ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಅದನ್ನು 24ನೇ ಎಸಿಎಂಎಂ ನ್ಯಾಯಾಲಯ ಅಂಗೀಕರಿಸಿದೆ.

ಇದೀಗ ಉಪ ರಿಜಿಸ್ಟ್ರಾರ್ ‌ಮೂಲಕ ತನಿಖಾಧಿಕಾರಿ ಸಹ ಪ್ರಕರಣ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

'ಪ್ರಕರಣ ದಾಖಲಾದ ದಿನದಿಂದಲೂ ಯುವತಿ ಕೈಗೆ ಸಿಕ್ಕಿಲ್ಲ. ನೇರವಾಗಿ ಹೇಳಿಕೆಯನ್ನೂ ಕೊಟ್ಟಿಲ್ಲ. ಹೇಳಿಕೆ ಪಡೆಯಲು ಸಾಕಷ್ಟು ಬಾರಿ ಯತ್ನಿಸಿದರೂ ಯುವತಿ‌ ಕೈಗೆ ಸಿಕ್ಕಿಲ್ಲ' ಎಂದೂ ತನಿಖಾಧಿಕಾರಿ ಎಂ.ಸಿ. ಕವಿತಾ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

'ನೂಣವಿನಕೆರೆ ಪೊಲೀಸ್ ಠಾಣೆ ವರ್ಸಸ್ ಶಿವಣ್ಣ' ಪ್ರಕರಣದಲ್ಲಿ ಹೈಕೋರ್ಟ್ ಕೆಲವು ನಿರ್ದೇಶನಗಳನ್ನು ನೀಡಿದೆ. ಸಿಆರ್‌ಪಿಸಿ 164 ಅಡಿ ಸಾಕ್ಷ್ಯ ದಾಖಲಿಸಿಕೊಳ್ಳಲು ಯಾರೊಬ್ಬರೂ ನೇರವಾಗಿ ನ್ಯಾಯಾಲಯಕ್ಕೆ ಬರಲು ಸಾಧ್ಯವಿಲ್ಲ. ಸಂಬಂಧಪಟ್ಟ ತನಿಖಾಧಿಕಾರಿ ಮಾತ್ರ‌ ಅರ್ಜಿ ಸಲ್ಲಿಸಿ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಲಯವನ್ನು ಕೋರಬೇಕು' ಎಂದೂ ಅರ್ಜಿಯಲ್ಲಿ ತಿಳಿಸಿರುವುದಾಗಿ ಗೊತ್ತಾಗಿದೆ.

'ಯುವತಿಯಿಂದ ಹೇಳಿಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿದೆ. ಅದಾದ ನಂತರ 164 ಅಡಿ ಹೇಳಿಕೆ ಪಡೆಯಲು ಅರ್ಜಿ ಸಲ್ಲಿಸುತ್ತೇವೆ.'

'ಇಷ್ಟು ದಿನ‌ ನಮ್ಮ‌ ಕೈಗೆ ಸಿಗದ ಯುವತಿ, ಇದೀಗ ನ್ಯಾಯಾಲಯಕ್ಕೆ ಬರುತ್ತಿರುವುದಾಗಿ ಅವರ ಪರ ವಕೀಲರಿಂದ ಗೊತ್ತಾಗಿದೆ. ಯುವತಿ ಬಂದರೆ, ಅವರಿಂದ ಹೇಳಿಕೆ‌ ಪಡೆಯಲುಅನುಮತಿ ನೀಡಬೇಕೆಂದು ನ್ಯಾಯಾಲಯವನ್ನು ವಿನಂತಿಸುತ್ತೇನೆ' ಎಂದೂ ತನಿಖಾಧಿಕಾರಿ ಅರ್ಜಿಯಲ್ಲಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.