ADVERTISEMENT

ಸಿ.ಡಿ. ಪ್ರಕರಣ: ಯುವತಿಯ ಹಾಸಿಗೆಯಡಿ ₹9 ಲಕ್ಷ

ಆರೋಪಿಗಳಿಗಾಗಿ ಮುಂದುವರಿದ ಎಸ್‌ಐಟಿ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 22:21 IST
Last Updated 18 ಮಾರ್ಚ್ 2021, 22:21 IST
ಸಿ.ಡಿ. ಪ್ರಕರಣ
ಸಿ.ಡಿ. ಪ್ರಕರಣ   

ಬೆಂಗಳೂರು: ಸಿ.ಡಿ.ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ಸಿ.ಡಿ.ಯಲ್ಲಿರುವ ಯುವತಿ ವಾಸವಿದ್ದ ಬೆಂಗಳೂರಿನ ಆರ್‌.ಟಿ.ನಗರದಲ್ಲಿರುವ ಕೊಠಡಿಯಲ್ಲಿ ಪರಿಶೀಲನೆ ನಡೆಸಿದ್ದು, ಕೊಠಡಿಯ ಹಾಸಿಗೆ ಕೆಳಗೆ ಮುಚ್ಚಿಟ್ಟಿದ್ದ ₹ 9 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ. ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ಪ್ರಮುಖ ಆರೋಪಿಗಳ ಪತ್ತೆಗಾಗಿ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ. ಇದುವರೆಗೂ 40ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದಾರೆ.

ರಮೇಶ ದೂರಿನಡಿ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆಯುತ್ತಿರುವ ಅಧಿಕಾರಿಗಳು, ನಿತ್ಯವೂ ಹಲವೆಡೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

‘ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿ ನಗರಕ್ಕೆ ಬಂದಿದ್ದ ಯುವತಿ, ಆರ್‌.ಟಿ.ನಗರದ ಮನೆಯೊಂದರ ಮಹಡಿಯಲ್ಲಿದ್ದ ಕೊಠಡಿಯಲ್ಲಿ ಒಂಟಿಯಾಗಿ ವಾಸವಿದ್ದರು. ಮಾ. 2ರಂದು ಸಿ.ಡಿ. ಪ್ರಕರಣ ಸಂಬಂಧ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ದೂರು ನೀಡುವುದಕ್ಕೂ ಮುನ್ನವೇ ಯುವತಿ ಕೊಠಡಿ ಖಾಲಿ ಮಾಡಿಕೊಂಡು ಹೋಗಿದ್ದಾರೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಆರಂಭದಲ್ಲಿ ಕೊಠಡಿ ಹೊರಭಾಗದಲ್ಲಿ ಮಾತ್ರ ಪರಿಶೀಲನೆ ನಡೆಸಲಾಗಿತ್ತು. ಇದೀಗ ನ್ಯಾಯಾಲಯದ ವಾರೆಂಟ್ ಪಡೆದು ಮಾಲೀಕರ ಸಮ್ಮುಖದಲ್ಲಿ ಕೊಠಡಿಯೊಳಗೆ ಪರಿಶೀಲನೆ ನಡೆಸಲಾಯಿತು. ಹಾಸಿಗೆಯಡಿ ಇಟ್ಟಿದ್ದ ಬ್ಯಾಗೊಂದರಲ್ಲಿ ₹9 ಲಕ್ಷ ನಗದು ಪತ್ತೆಯಾಗಿದೆ. ಅಷ್ಟು ಹಣ ಯುವತಿ ಕಡೆ ಹೇಗೆ ಬಂತು?’ ಎಂದೂ ಮೂಲಗಳು ತಿಳಿಸಿವೆ.

‘ಯುವತಿ ಇದುವರೆಗೂ ಪತ್ತೆಯಾಗಿಲ್ಲ. ಅವರ ವಿಚಾರಣೆ ನಡೆಸಿದ ನಂತರ, ಹಣದ ಬಗ್ಗೆ ಮಾಹಿತಿ ಕೇಳಲಾಗುವುದು. ಮುಂಜಾಗ್ರಾತಾ ಕ್ರಮವಾಗಿ ಹಣ ಸಿಕ್ಕ ದೃಶ್ಯಗಳನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದೆ’ ಎಂದೂ ಹೇಳಿವೆ.

₹18 ಲಕ್ಷ ಚಿನ್ನ ಖರೀದಿ ರಶೀದಿ: ‘ಸುದ್ದಿವಾಹಿನಿಯಲ್ಲಿ ವರದಿಗಾರನಾಗಿ ಕೆಲಸ ಮಾಡಿ, ನಂತರ ಕೆಲಸ ಬಿಟ್ಟಿದ್ದ ವ್ಯಕ್ತಿ ವಿಚಾರಣೆಗೆ ಹಾಜರಾಗುತ್ತಿಲ್ಲ. ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿರುವ ಆತನ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದ್ದು, ₹ 18 ಲಕ್ಷ ಮೌಲ್ಯದ ಚಿನ್ನ ಖರೀದಿ ಮಾಡಿರುವ ರಶೀದಿ ಸಿಕ್ಕಿದೆ.’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಸಿ.ಡಿ. ಪ್ರಕರಣದಲ್ಲಿ ವಿಚಾರಣೆಗಾಗಿ ಎಸ್‌ಐಟಿ ಅಧಿಕಾರಿಗಳು ಹುಡುಕುತ್ತಿರುವ ಇಬ್ಬರು ವ್ಯಕ್ತಿಗಳು ತಮ್ಮ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ‘ಪ್ರಕರಣದಲ್ಲಿ ನಮ್ಮ ತಪ್ಪಿಲ್ಲ. ಸದ್ಯದಲ್ಲೇ ವಿಚಾರಣೆಗೆ ಹಾಜರಾಗಲಿದ್ದೇವೆ’ ಎಂದು ಹೇಳಿದ್ದಾರೆ.

ವರದಿಗಾರನಾಗಿ ಕೆಲಸ ಮಾಡಿದ್ದ ವ್ಯಕ್ತಿ, ‘ಸ್ನೇಹಿತರೊಬ್ಬರ ಮೂಲಕ ಮೊಬೈಲ್ ನಂಬರ್ ಪಡೆದು ಕರೆ ಮಾಡಿದ್ದ ಯುವತಿ, ರಮೇಶ ಜಾರಕಿಹೊಳಿಯಿಂದ ಅನ್ಯಾಯವಾಗಿರುವುದಾಗಿ ಹೇಳಿದ್ದರು. ಸೂಕ್ತ ಪುರಾವೆ ನೀಡಿದರೆ ಸುದ್ದಿ ಮಾಡುವುದಾಗಿ ಹೇಳಿದ್ದೆ. ಆ ಬಗ್ಗೆ 15ರಿಂದ 20 ಬಾರಿ ಮಾತನಾಡಿದ್ದೆ. ಅದಾದ ನಂತರ ತಾಯಿಗೆ ಹುಷಾರಿಲ್ಲದಿದ್ದರಿಂದ ಆರೈಕೆಯಲ್ಲಿ ತೊಡಗಿದ್ದೆ.’

‘ಸಿ.ಡಿ.ಯಲ್ಲಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದಾಗಲೇ ನನಗೆ ವಿಷಯ ಗೊತ್ತಾಯಿತು. ಯುವತಿ ಸಂಪರ್ಕಿಸಿದ್ದು ಇದೇ ವಿಷಯಕ್ಕಾ ಎಂಬುದು ತಿಳಿಯಿತು’ ಎಂದೂ ಹೇಳಿದ್ದಾರೆ.

‘ಸಂತ್ರಸ್ತ ಯುವತಿಯನ್ನೇ ಆರೋಪಿ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಈತನ (ರಮೇಶ ಜಾರಕಿಹೊಳಿ) ಪ್ರಭಾವ ಯಾವ ರೀತಿ ಇರಬಹುದು ? ನೀಚ ಕೆಲಸ ಮಾಡಿರುವ ಈತನೇ (ರಮೇಶ) ಹಿಂಸೆ ಅನುಭವಿಸಬೇಕು. ಆದರೆ, ಇಲ್ಲಿ ಏನು ತಪ್ಪು ಮಾಡದ ನಾವು ಹಿಂಸೆ ಅನುಭವಿಸುವಂತಾಗಿದೆ. ಅವರು ಕನ್ನಡದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದೂ ವಿಡಿಯೊದಲ್ಲಿ ವ್ಯಕ್ತಿ ಹೇಳಿದ್ದಾರೆ.

ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿದ್ದ ಇನ್ನೊಬ್ಬ ವ್ಯಕ್ತಿ, ‘ಪೊಲೀಸರು ವಿಚಾರಣೆಗೆ ಕರೆದಿದ್ದಾಗ ಹಾಜರಾಗಿದ್ದೇನೆ. ಮತ್ತೆ ಕರೆದರೆ ಹೋಗುವೆ. ನಾನು ನಾಪತ್ತೆಯಾಗಿಲ್ಲ. ಸತ್ಯಾಸತ್ಯತೆ ತಿಳಿಯದೇ ನನ್ನ ಬಗ್ಗೆ ಏನೇನು ಸುದ್ದಿ ಪ್ರಸಾರ ಮಾಡಬೇಡಿ. ತೇಜೋವಧೆಗೆ ಯತ್ನಿಸಬೇಡಿ. ಜೀವನ ಹಾಳು ಮಾಡಬೇಡಿ. ಇದು ನನ್ನ ಮನವಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.