ADVERTISEMENT

‘ಕುಮಟಳ್ಳಿ ದರಿದ್ರ ಇದ್ದಾನೆ...’: ಸವದಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 19:45 IST
Last Updated 27 ಸೆಪ್ಟೆಂಬರ್ 2019, 19:45 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಳಗಾವಿ: ಅನರ್ಹ ಶಾಸಕ ಮಹೇಶ ಕುಮಠಳ್ಳಿ ಅವರನ್ನು ‘ದರಿದ್ರ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೀಯಾಳಿಸಿದರೆನ್ನಲಾದ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ರಮೇಶ ಜಾರಕಿಹೊಳಿ, ‘ಸವದಿ ನಾಲಗೆ ಬಿಗಿ ಹಿಡಿದು ಮಾತನಾಡಬೇಕು’ ಎಂದು ಎಚ್ಚರಿಕೆ ನೀಡಿದರು.

ಅಥಣಿಯಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಸ್ಥಳ ವೀಕ್ಷಣೆಗೆ ಹೋಗಿದ್ದ ಲಕ್ಷ್ಮಣ ಸವದಿ ಅವರು ದೂರವಾಣಿಯಲ್ಲಿ ಮಾತನಾಡುತ್ತ, ‘ಕುಮಠಳ್ಳಿ ದರಿದ್ರ ಇದ್ದಾನೆ. ಓಡಿ ಹೋಗಿರುವ ಅವರ ಬಗ್ಗೆ ಏನ್‌ ಮಾತನಾಡುತ್ತಿ ಬಿಡು...’ ಎಂದು ಹೇಳಿರುವ ವಿಡಿಯೊ ವೈರಲ್‌ ಆಗಿದೆ.

ADVERTISEMENT

ಕಣ್ಣೀರು ಹಾಕಿದ ಕುಮಠಳ್ಳಿ:
‘ಸ್ನೇಹಿತನಾಗಿರಲಿ ಅಥವಾ ವೈರಿಯಾಗಿರಲಿ. ಆದರೆ, ಆ ಶಬ್ದ ಬಳಸಬಾರದಿತ್ತು. ನಾನೇನೂ ಅವರಿಗೆ ಕೇಡು ಮಾಡಿರಲಿಲ್ಲ. ಅವರ‍್ಯಾಕೆ ಹೀಗೆ ಹೇಳಿದರೋ ಗೊತ್ತಿಲ್ಲ. ಅವರಿಗೆ ಒಳ್ಳೆಯದಾಗಲಿ’ ಎಂದು ಕುಮಠಳ್ಳಿ ಸುದ್ದಿಗಾರರ ಎದುರು ಕಣ್ಣೀರು ಹಾಕಿದರು.

ನಾಲಗೆ ಬಿಗಿಹಿಡಿಯಲಿ:
ಸ್ನೇಹಿತ, ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ‘ಸವದಿ ನಾಲಗೆ ಬಿಗಿ ಹಿಡಿದು ಮಾತನಾಡಲಿ. ನಾಲಗೆ ಹರಿಬಿಟ್ಟಿದ್ದರಿಂದಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಅವರು ನಾಲಗೆಯಿಂದಲೇ ಹಾಳಾಗಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

‘ನಮಗೆ ಅನ್ಯಾಯವಾಗಿದೆ ಎಂದು ರಾಜೀನಾಮೆ ನೀಡಿದ್ದೇವೆ. ಹೊರತು, ಬಿಜೆಪಿ ಸರ್ಕಾರ ರಚನೆಯಾಗಲಿ ಎಂದಲ್ಲ. ಅನರ್ಹ ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ನಂತರ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವ ಬಗ್ಗೆ ತೀರ್ಮಾನಿಸುತ್ತೇವೆ’ ಎಂದು ಹೇಳಿದರು.

ಸವದಿ ಸ್ಪಷ್ಟನೆ:
‘ಮಹೇಶ್ ಕುಮಠಳ್ಳಿ ಬಗ್ಗೆ ನಾನು ಮಾತಾಡಿಲ್ಲ. ಬೇರೊಬ್ಬ ಕುಮಠಳ್ಳಿ ಬಗ್ಗೆ ಎರಡು ತಿಂಗಳ ಹಿಂದೆ ಮಾತಾಡಿದ್ದನ್ನು ಈಗ ವೈರಲ್ ಮಾಡಲಾಗಿದೆ. ಇದರ ಹಿಂದೆ ದುರುದ್ದೇಶ ಅಡಗಿದೆ. ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ತರುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.

‘ಚುನಾವಣಾ ಸಂದರ್ಭವಾಗಿರುವುದರಿಂದ ಇದರ ಲಾಭ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಅವರು ನನಗೆ ಸ್ನೇಹಿತರಾಗಿದ್ದು, ಅವರ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಂದಿನ ದಿನಗಳಲ್ಲಿ ನಾವಿಬ್ಬರೂ ಜೊತೆಯಾಗಿಯೇ ಹೋಗುತ್ತೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.