ADVERTISEMENT

ಕಾಸರಗೋಡು ಚಿನ್ನಾಗೆ ‘ರಂಗ ಭಾಸ್ಕರ’

ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ನಾಟಕೋತ್ಸವ 21ರಿಂದ 24

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 5:40 IST
Last Updated 20 ಸೆಪ್ಟೆಂಬರ್ 2019, 5:40 IST
ಕಾಸರಗೋಡು ಚಿನ್ನಾ
ಕಾಸರಗೋಡು ಚಿನ್ನಾ   

ಮಂಗಳೂರು: ಇಲ್ಲಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ‘ರಂಗ ಭಾಸ್ಕರ–2019’ ಪ್ರಶಸ್ತಿಗೆ ಹಿರಿಯ ರಂಗಕರ್ಮಿ, ಸಿನಿಮಾ ನಟ ಕಾಸರಗೋಡು ಚಿನ್ನಾ ಆಯ್ಕೆಯಾಗಿದ್ದು, ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಇದೇ 24ರಂದು ಸಂಜೆ 6ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

‘ಪ್ರಶಸ್ತಿಯು ₹5 ಸಾವಿರ ನಗದು, ಪ್ರಶಸ್ತಿ ಪತ್ರ, ಫಲಕ, ಸನ್ಮಾನವನ್ನು ಒಳಗೊಂಡಿದೆ. ಐದನೇ ವರ್ಷದ ಪ್ರಶಸ್ತಿ ಇದಾಗಿದ್ದು, ಈ ಹಿಂದೆ ರಂಗಕ್ಷೇತ್ರಕ್ಕೆ ಕೊಡುಗೆ ನೀಡಿದ ವೇಣುಮಿತ್ರ, ವಿಟ್ಲ ಮಂಗೇಶ್‌ ಭಟ್, ರೋಹಿಣಿ ಜಗರಾಮ್ ಹಾಗೂ ಜಗನ್ ಪವಾರ್ ಬೇಕಲ್ ಅವರಿಗೆ ಪ್ರಶಸ್ತಿ ನೀಡಲಾಗಿತ್ತು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್‌ ಮಾರ್ಟಿಸ್‌, ರಂಗಕರ್ಮಿ ಡಾ.ನಾ.ದಾಮೋದರ ಶೆಟ್ಟಿ, ಲುಕುಮಿ ತಂಡದ ನಿರ್ದೇಶಕ ಕಿಶೋರ್ ಡಿ. ಶೆಟ್ಟಿ, ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವರಾವ್, ಕೆನರಾ ಪದವಿ ಪೂರ್ವ ಕಾಲೇಜಿನ ಪ್ರೊ.ಗೋಪಾಲಕೃಷ್ಣ ಶೆಟ್ಟಿ, ಅಲೋಶಿಯಸ್ ಕಾಲೇಜು ಕನ್ನಡ ಸಂಘದ ಅಧ್ಯಕ್ಷ ಡಾ.ದಿನೇಶ್‌ ನಾಯಕ್, ರಂಗಸಂಗಾತಿಯ ಟ್ರಸ್ಟಿ ಎಂ.ಕರುಣಾಕರ ಶೆಟ್ಟಿ ಉಪಸ್ಥಿತರಿರುವರು.

ADVERTISEMENT

ನಾಟಕೋತ್ಸವ:

ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ‘ರಂಗ ಭಾಸ್ಕರ’ ನಾಟಕೋತ್ಸವನ್ನು ಇದೇ 21ರಿಂದ 24ರ ತನಕ ಪ್ರತಿ ನಿತ್ಯ ಸಂಜೆ 6ಕ್ಕೆ ಹಮ್ಮಿಕೊಳ್ಳಲಾಗಿದೆ. ಮೊದಲ ಮೂರು ದಿನ ಶಿವಮೊಗ್ಗದ ರಂಗಾಯಣ ಹಾಗೂ ಕೊನೆ ದಿನ ರಂಗಸಂಗಾತಿಯು ನಾಟಕ ಪ್ರಸ್ತುತ ಪಡಿಸಲಿದೆ. ಪ್ರವೇಶ ಉಚಿತವಾಗಿದೆ ಎಂದರು.

ಇದೇ 21ರಂದು ಪ್ರೊ.ಅರವಿಂದ ಮಾಲಗತ್ತಿ ಆತ್ಮಕಥನ ಆಧರಿತ, ಡಾ.ಎಂ.ಗಣೇಶ ನಿರ್ದೇಶನದ ‘ಗೌರ್ಮೆಂಟ್‌ ಬ್ರಾಹ್ಮಣ’, 22ರಂದು ಜಾಯ್‌ ಮೆಸ್ಕಾಂ ಅವರ ಪರಿಕಲ್ಪನೆ ಹಾಗೂ ನಿರ್ದೇಶನದ ‘ಇದಕ್ಕೆ ಕೊನೆ ಎಂದು?’, 23ರಂದು ಪುನೀತ್ ಕಪೂರ್‌ ಬರೆದ, ಸವಿತಾರಾನಿ ನಿರ್ದೇಶನದ ‘ಟ್ರಾನ್ಸ್‌ ನೇಷನ್‌’ ಹಾಗೂ 24ರಂದು ವೈದೇಹಿ ಕಥೆ ಆಧರಿಸಿ ಶಶಿರಾಜ್ ಕಾವೂರ್‌ ಬರೆದ, ರಾಮ್‌ ಶೆಟ್ಟಿ ಹಾರಾಡಿ ನಿರ್ದೇಶನ ‘ಮರ–ಗಿಡ–ಬಳ್ಳಿ’ ಪ್ರದರ್ಶನಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿಯ ಎಂ.ಕರುಣಾಕರ ಶೆಟ್ಟಿ ಹಾಗೂ ಸುರೇಶ್‌ ಬೆಳ್ಚಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.