ADVERTISEMENT

ಲೈಂಗಿಕ ದೌರ್ಜನ್ಯ: ಅಪರಾಧಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 21:46 IST
Last Updated 10 ಫೆಬ್ರುವರಿ 2023, 21:46 IST
   

ಬೆಂಗಳೂರು: ಹದಿನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿ ಶ್ರೀನಿವಾಸ್ (41) ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 3ನೇ ತ್ವರಿತ ವಿಶೇಷ ನ್ಯಾಯಾಲಯ (ಎಫ್‌ಟಿಎಸ್‌ಸಿ) ಆದೇಶ ಹೊರಡಿಸಿದೆ.

ಸುಬ್ರಮಣ್ಯಪುರ ಠಾಣೆಯಲ್ಲಿ 2020ರ ಜುಲೈ 7ರಂದು ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಇಷ್ರತ್ ಜಹಾನ್ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ಗೊರವರ ವಾದಿಸಿದ್ದರು.

‘ಬಾಲಕಿಯು ಪೋಷಕರ ಜೊತೆ ಉತ್ತರಹಳ್ಳಿಯಲ್ಲಿ ವಾಸವಿದ್ದಳು. ಪೋಷಕರು ಕೆಲಸಕ್ಕೆ ಹೋದಾಗ, ಒಬ್ಬಳೇ ಮನೆಯಲ್ಲಿರುತ್ತಿದ್ದಳು. ಇದೇ ವೇಳೆಯೇ ಮನೆಗೆ ನುಗ್ಗಿದ್ದ ಆರೋಪಿ ಅತ್ಯಾಚಾರ ಎಸಗಿದ್ದ. ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಯೊಡ್ಡಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಹೆದರಿದ್ದ ಬಾಲಕಿ ವಿಷಯವನ್ನು ಮುಚ್ಚಿಟ್ಟಿದ್ದಳು. ಇದರ ನಡುವೆಯೇ ಎರಡನೇ ಬಾರಿ ಮನೆಗೆ ನುಗ್ಗಿದ್ದ ಆರೋಪಿ, ಬಾಲಕಿ ಮೇಲೆ ಪುನಃ ಅತ್ಯಾಚಾರ ಎಸಗಿದ್ದ. ನೊಂದ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದಳು. ಬಾಲಕಿ ಪರವಾಗಿ ತಾಯಿ ದೂರು ನೀಡಿದ್ದರು.’

‘ಅತ್ಯಾಚಾರ (ಐಪಿಸಿ 376) ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಗಿರಿನಗರದ ಈರಣ್ಣ ಗುಡ್ಡೆ ನಿವಾಸಿ ಶ್ರೀನಿವಾಸ್‌ನನ್ನು ಬಂಧಿಸಿದ್ದ ಅಂದಿನ ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.