ADVERTISEMENT

ಸಿ.ಡಿ. ಪ್ರಕರಣ | ಅತ್ಯಾಚಾರ: ಮಂತ್ರಿ ಫ್ಲ್ಯಾಟ್‌ನಲ್ಲಿ ಮಹಜರು

ವಿಚಾರಣೆಗೆ ಹಾಜರಾಗಲು ಶಾಸಕ ರಮೇಶ ಜಾರಕಿಹೊಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 20:11 IST
Last Updated 1 ಏಪ್ರಿಲ್ 2021, 20:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ 'ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ' ಎಂದು ಸ್ವ-ಇಚ್ಛಾ ಹೇಳಿಕೆ ನೀಡಿರುವ ಸಂತ್ರಸ್ತೆಯ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ಗುರುವಾರ ನಡೆದಿದೆ.

ಸಿಆರ್‌ಪಿಸಿ 164ರಡಿ ಸಂತ್ರಸ್ತೆ ನೀಡಿರುವ ಹೇಳಿಕೆಯ ಪ್ರತಿ, ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಯೂ ಆಗಿರುವ ಎಸಿ‍ಪಿ ಎಂ.ಸಿ. ಕವಿತಾ ಕೈ ಸೇರಿದೆ. ಅದರಲ್ಲಿರುವ ಅಂಶಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿರುವ ಕವಿತಾ, ಬುಧವಾರವಷ್ಟೇ ಯುವತಿ ಪೂರಕ ಹೇಳಿಕೆ ಪಡೆದು, ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸಿದ್ದರು.

ಮಹಜರು ಪ್ರಕ್ರಿಯೆ ಆರಂಭಿಸಿದ ತನಿಖಾಧಿಕಾರಿ, ನಗರದ ಹಲವು ಸ್ಥಳಗಳಿಗೆ ಭೇಟಿ ಕೊಟ್ಟರು. ಈ ಹಿಂದಿನ ಕೆಲ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ ನೀಡಿರುವ ನಿಯಮಗಳ ಅನ್ವಯ ವಿಧಿವಿಜ್ಞಾನ ಪ್ರಯಾಗಾಲಯದ ಅಧಿಕಾರಿಗಳ ಜೊತೆಯಲ್ಲೇ ತನಿಖಾಧಿಕಾರಿಯವರು ಮಹಜರು ಮಾಡಿದರು.

ADVERTISEMENT

ಅತ್ಯಾಚಾರ ನಡೆದಿದ್ದ ಫ್ಲ್ಯಾಟ್‌ನಲ್ಲೂ ಮಹಜರು: ಯುವತಿ ಮೇಲೆ ರಮೇಶ ಜಾರಕಿಹೊಳಿ ಅತ್ಯಾಚಾರ ನಡೆಸಿದ್ದರು ಎನ್ನಲಾದ ಮಲ್ಲೇಶ್ವರದಲ್ಲಿರುವ ಮಂತ್ರಿ ಗ್ರೀನ್ಸ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲೂ ಮಹಜರು ಪ್ರಕ್ರಿಯೆ ನಡೆಯಿತು.

ಸಮುಚ್ಚಯದ ’ಸಿ’ ಬ್ಲಾಕ್‌ನ 17ನೇ ಮಹಡಿಯಲ್ಲಿರುವ ಫ್ಲ್ಯಾಟ್‌ಗೆ ಹೋದ ಸಂತ್ರಸ್ತೆ, ರಮೇಶ ಜಾರಕಿಹೊಳಿ ಜೊತೆಗೆ ಕಳೆದ ಪ್ರತಿಯೊಂದು ಕ್ಷಣಗಳನ್ನೂ ವಿವರಿಸಿದರು. ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಯಿತು. ಸಂದರ್ಶಕರ ಪಟ್ಟಿ ಪುಸ್ತಕ, ಕೊಠಡಿಯಲ್ಲಿದ್ದ ಬಟ್ಟೆಗಳು, ಬೆಡ್‌ಶಿಟ್‌ಗಳು, ಸ್ಥಳದಲ್ಲಿ ಸಿಕ್ಕ ಕೆಲ ಕೂದಲುಗಳನ್ನೂ ತನಿಖಾ ತಂಡ ಸುಪರ್ದಿಗೆ ಪಡೆದಿರುವುದಾಗಿ ಗೊತ್ತಾಗಿದೆ.

‘ನನ್ನನ್ನು ಮೊದಲೇ ಫ್ಲ್ಯಾಟ್‌ಗೆ ಕರೆಸಿಕೊಳ್ಳುತ್ತಿದ್ದ ರಮೇಶ ಜಾರಕಿಹೊಳಿ, ತಡವಾಗಿ ಬರುತ್ತಿದ್ದರು. ಕೊಠಡಿಯಲ್ಲೂ ಕಾಯುವಂತೆ ಹೇಳುತ್ತಿದ್ದರು. ಅವರು ಹೇಳಿದ್ದರಿಂದ, ಕೆಲ ಬಾರಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ಹಿಂಬಾಗಿಲಿನಿಂದಲೂ ಒಳಗೆ ಬಂದಿದೆ. ಮೂರು ಸಾರಿ ಫ್ಲ್ಯಾಟ್‌ಗೆ ಬಂದಿದ್ದೆ. ಮೂರು ಬಾರಿಯೂ ಕೊಠಡಿಯಲ್ಲಿ ನನ್ನ ಮೇಲೆ ರಮೇಶ ಜಾರಕಿಹೊಳಿ ಅತ್ಯಾಚಾರ ಮಾಡಿದ್ದಾರೆ’ ಎಂದೂ ಸಂತ್ರಸ್ತೆ ವಿವರಿಸಿರುವುದಾಗಿ ಮೂಲಗಳು ಹೇಳಿವೆ.

ಸಂತ್ರಸ್ತೆ ಹಾಗೂ ತನಿಖಾ ತಂಡಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಬೆಂಗಾವಲು ವಾಹನವೂ ಜೊತೆಗಿತ್ತು. ಮಹಜರು ನಡೆಯುವ ಸ್ಥಳದಲ್ಲಿ ಸಾರ್ವಜನಿಕರ‌ ಓಡಾಟ ನಿರ್ಬಂಧಿಸಲಾಗಿತ್ತು.

ಕೊಠಡಿಯಲ್ಲಿ ಬಟ್ಟೆ ಸಂಗ್ರಹ: ಸಂತ್ರಸ್ತೆ ವಾಸವಿದ್ದ ಆರ್‌.ಟಿ.ನಗರದಲ್ಲಿರುವ ಕೊಠಡಿಗೆ ಹೋಗಿದ್ದ ತನಿಖಾ ತಂಡ, ಸಂತ್ರಸ್ತೆಯಿಂದಲೇ ವಿಸ್ತೃತ ಮಾಹಿತಿ ಪಡೆಯಿತು. ಕೊಠಡಿಯಲ್ಲಿ ಯಾರೆಲ್ಲ ಇದ್ದರು ? ಬೇರೆ ಯಾರೆಲ್ಲ ಬಂದು ಹೋಗಿದ್ದರು ? ಅವರು ಎಲ್ಲಿ ಕುಳಿತುಕೊಂಡಿದ್ದರು? ಕೊಠಡಿ ಮಾಲೀಕರ ಜೊತೆಗಿನ ಒಡನಾಟ ? ಅಕ್ಕ–ಪಕ್ಕದ ಹೋಟೆಲ್ ಹಾಗೂ ಅಂಗಡಿಗಳ ಬಳಿ ಭೇಟಿಯಾದ ವ್ಯಕ್ತಿಗಳು ? ಹೀಗೆ ಹಲವು ಪ್ರಶ್ನೆಗಳನ್ನು ಆಧರಿಸಿ ಮಹಜರು ನಡೆಸಲಾಯಿತು. ಎಲ್ಲ ಪ್ರಕ್ರಿಯೆಯನ್ನೂ ಫೋಟೊ ಹಾಗೂ ವಿಡಿಯೊ ಮೂಲಕ ದಾಖಲಿಸಿಕೊಳ್ಳಲಾಯಿತು.

‘ಪ್ರಕರಣ ಬೆಳಕಿಗೆ ಬಂದ ಮಾರ್ಚ್‌ 2ರಂದು ರಾತ್ರಿಯೇ ಯುವತಿ ಕೊಠಡಿ ತೊರೆದಿದ್ದರು. ಆದರೆ, ಅವರ ಬಟ್ಟೆ ಹಾಗೂ ಗೃಹ ಬಳಕೆ ವಸ್ತುಗಳು ಅಲ್ಲಿಯೇ ಇದ್ದವು. ಆ ಪೈಕಿ ಬಟ್ಟೆಗಳು ಸೇರಿದಂತೆ ಕೆಲ ದಾಖಲೆಗಳನ್ನೂ ಸುಪರ್ದಿಗೆ ಪಡೆಯಲಾಯಿತು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಆರೋಪಿಗೆ ನೋಟಿಸ್: ಯುವತಿ ನೀಡಿದ್ದ ದೂರು ಆಧರಿಸಿ ದಾಖಲಾಗಿರುವ ಎಫ್‌ಐಆರ್‌ ವಿಚಾರಣೆಗೆ ಇತ್ತೀಚೆಗಷ್ಟೇ ಹಾಜರಾಗಿದ್ದ ರಮೇಶ ಜಾರಕಿಹೊಳಿ ಅವರಿಗೆ ಮತ್ತೊಂದು ನೋಟಿಸ್ ನೀಡಲಾಗಿದೆ.

‘ಪ್ರಕರಣದಲ್ಲಿ ನಿಮ್ಮಿಂದ ಹಲವು ಅಗತ್ಯ ಮಾಹಿತಿ ಬೇಕಿದೆ. ಹೀಗಾಗಿ, ಶುಕ್ರವಾರ (ಏಪ್ರಿಲ್ 2) ಬೆಳಿಗ್ಗೆ 10 ಗಂಟೆಗೆ ವಿಚಾರಣೆಗಾಗಿ ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗದ ವಿಶೇಷ ಕೊಠಡಿಗೆ ಹಾಜರಾಗಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ನೋಟಿಸ್‌ನಲ್ಲಿ ತನಿಖಾಧಿಕಾರಿ ಎಚ್ಚರಿಸಿದ್ದಾರೆ.

ಬಹಿರಂಗವಾಗಿ ಕಾಣಿಸಿಕೊಳ್ಳದ ರಮೇಶ

ಸಂತ್ರಸ್ತೆ ನ್ಯಾಯಾಲಯಕ್ಕೆ ಹೇಳಿಕೆ ನೀಡಿದಾಗಿನಿಂದಲೂ ರಮೇಶ ಜಾರಕಿಹೊಳಿ ಬಹಿರಂಗವಾಗಿ ಎಲ್ಲಿಯೂ ಕಾಣಿಸುತ್ತಿಲ್ಲ. ಮಾರ್ಚ್ 30ರಂದು ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ಆ ನಂತರ ಎಲ್ಲಿದ್ದಾರೆ ಎಂಬ ಮಾಹಿತಿಯೂ ಯಾರಿಗೂ ಸಿಗುತ್ತಿಲ್ಲ. ಅವರ ಬಗ್ಗೆ ಎಸ್‌ಐಟಿ ತಂಡವೂ ಮಾಹಿತಿ ಕಲೆಹಾಕುತ್ತಿದೆ.

‘ಶುಕ್ರವಾರ ಬೆಳಿಗ್ಗೆ ರಮೇಶ ವಿಚಾರಣೆಗೆ ಬರಬಹುದೆಂದು ಕಾಯುತ್ತಿದ್ದೇವೆ. ಬಂದರೆ, ವಿಚಾರಣೆ ನಡೆಸಲಾಗುವುದು. ಇಲ್ಲದಿದ್ದರೆ, ಮುಂದಿನ ಕಾನೂನು ಕ್ರಮ’ ಎಂದೂ ಎಸ್‌ಐಟಿ ಮೂಲಗಳು ಹೇಳಿವೆ.

ಆರೋಪಿ ಬಂಧಿಸದಿದ್ದರೆ ನ್ಯಾಯಾಲಯ ಮೊರೆ’

‘ಪ್ರಕರಣ ದಾಖಲಾದ ನಂತರ ಸಿಆರ್‌ಪಿಸಿ 164ರಡಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿದೆ. ಇಷ್ಟಾದರೂ ಆರೋಪಿ ರಮೇಶ ಜಾರಕಿಹೊಳಿ ಬಂಧನವಾಗಿಲ್ಲ. ಅವರನ್ನು ಕೂಡಲೇ ಬಂಧಿಸದಿದ್ದರೆ, ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಸಂತ್ರಸ್ತೆ ಪರ ವಕೀಲ ಕೆ.ಎನ್‌. ಜಗದೀಶ್‌ಕುಮಾರ್ ತಿಳಿಸಿದ್ದಾರೆ.

ಸಿ.ಡಿ. ಸೂತ್ರಧಾರರಿಗಾಗಿ ಶೋಧ

‘ವಿಡಿಯೊ ಚಿತ್ರೀಕರಣ ಮಾಡಲು ಸುದ್ದಿವಾಹಿನಿಯ ಕೆಲ ವ್ಯಕ್ತಿಗಳು, ಯುವತಿಗೆ ಸಹಾಯ ಮಾಡಿದ್ದ ಮಾಹಿತಿ ತನಿಖೆಯಿಂದ ಸಿಕ್ಕಿದೆ. ಆ ವ್ಯಕ್ತಿಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಕಲೆಹಾಕಲಾಗಿದ್ದು, ಅವರಿಗಾಗಿ ಚುರುಕಿನ ಶೋಧ ನಡೆಯುತ್ತಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಸಿ.ಡಿ. ಚಿತ್ರೀಕರಣ ಹಾಗೂ ಅದನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದ ತಂಡವೇ ಬೇರೆ ಇದೆ. ಯುವತಿಯಿಂದಲೂ ಆ ಬಗ್ಗೆ ಮಾಹಿತಿ ಸಿಕ್ಕಿದೆ. ಈಗ ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ತನಿಖೆಯಿಂದಲೇ ಎಲ್ಲರೂ ನಿಖರವಾಗಬೇಕಿದೆ’ ಎಂದೂ ತಿಳಿಸಿವೆ.

ಮಗಳ ಭೇಟಿಗೆ ಅವಕಾಶ ಕಲ್ಪಿಸಿ’

ವಿಜಯಪುರ: ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸಿಡಿ ಪ್ರಕರಣದ ಸಂತ್ರಸ್ತ ಯುವತಿಯ ತಂದೆ, ತಾಯಿ ಮತ್ತು ಸಹೋದರ ಜಿಲ್ಲೆಯಲ್ಲಿರುವ ಅವರ ಅಜ್ಜಿ ಮನೆಗೆ ಗುರುವಾರ ಬೆಳಿಗ್ಗೆ ಬಂದಿದ್ದು, ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದ್ದಾರೆ.

‘ಮಗಳನ್ನು ಮನೆಗೆ ಕಳಿಸುವಂತೆ ಆದೇಶಿಸಲಿ, ಮಗಳ ಜತೆ ಮಾತನಾಡಲು ಅವಕಾಶ ಕಲ್ಪಿಸಬೇಕು. ಎಸ್‌ಐಟಿಯವರು ಮಗಳ ಭೇಟಿಗೆ ಅವಕಾಶ ಕಲ್ಪಿಸಿದರೆ ಬೆಂಗಳೂರಿಗೆ ಹೋಗುತ್ತೇವೆ’ ಎಂದು ಯುವತಿಯ ತಂದೆ ಮನವಿ ಮಾಡಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು, ನನ್ನ ಕುಟುಂಬ ಯಾವುದೇ, ಯಾರದೇ ಪ್ರಭಾವಕ್ಕೂ ಒಳಗಾಗಿಲ್ಲ. ಇಲ್ಲಿಯವರೆಗೆ ಮಗಳು ಕುಟುಂಬದವರ ಜತೆ ಫೋನ್‌ನಲ್ಲಿ ಮಾತನಾಡಿದ ಎಲ್ಲ ರೆಕಾರ್ಡ್‌ಗಳನ್ನು ಎಸ್‌ಐಟಿಗೆ ನೀಡಿದ್ದೇವೆ, ಈಗ ಅವುಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಿಡಿ ಪ್ರಕರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಕಾರಣ. ಆಕೆಯನ್ನು ನಮ್ಮ ಜೊತೆ ಕಳುಹಿಸಬೇಕು’ ಎಂದು ಯುವತಿಯ ಸಹೋದರ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.