ADVERTISEMENT

ರತ್ನಪ್ರಭಾ ಸೆಳೆಯಲು ಬಿಜೆಪಿ ಯತ್ನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 19:36 IST
Last Updated 31 ಆಗಸ್ಟ್ 2018, 19:36 IST
   

ಬೆಂಗಳೂರು: ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರನ್ನು ಪಕ್ಷಕ್ಕೆ ಕರೆತರಲು ಬಿಜೆಪಿ ನಾಯಕರು ಪ್ರಯತ್ನ ಆರಂಭಿಸಿದ್ದಾರೆ. ಆದರೆ, ‘ರಾಜಕೀಯದಲ್ಲಿ ಆಸಕ್ತಿ ಇಲ್ಲ’ ಎಂದು ರತ್ನಪ್ರಭಾ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಲು ಕೇಸರಿ ಪಡೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಮಾಲೀಕಯ್ಯ ಗುತ್ತೇದಾರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಾಬುರಾವ್‌ ಚಿಂಚನಸೂರ ಅವರನ್ನು ಪಕ್ಷಕ್ಕೆ ಬುಧವಾರ ಸೇರಿಸಿಕೊಳ್ಳಲಾಗಿದೆ. ರತ್ನಪ್ರಭಾ ಅವರನ್ನು ಸೇರಿಸಿಕೊಂಡರೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ಬರಲಿದೆ ಎಂಬುದು ಬಿಜೆಪಿ ನಾಯಕರ ಅಭಿಮತ.

‘ಬಿಜೆಪಿಗೆ ಸೇರಲು ಹಲವು ನಿವೃತ್ತ ಅಧಿಕಾರಿಗಳು ಆಸಕ್ತಿ ಹೊಂದಿದ್ದಾರೆ. ರತ್ನಪ್ರಭಾ ಸೇರ್ಪಡೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಇಲ್ಲಿಯವರೆಗೆ ಚರ್ಚೆ ನಡೆದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ADVERTISEMENT

‘ರತ್ನಪ್ರಭಾ ಅವರನ್ನು ಸೇರಿಸಿಕೊಳ್ಳಲು ಮಾತುಕತೆಗಳು ನಡೆಯುತ್ತಿವೆ. ಪಕ್ಷದಲ್ಲಿ ಅವರಿಗೆ ಯಾವ ಹುದ್ದೆ ನೀಡಬೇಕು ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದರು.

‘ಕೆಲವು ದಿನಗಳಿಂದ ಹೈದರಾಬಾದ್‌ನಲ್ಲಿದ್ದೇನೆ. ಪಕ್ಷಕ್ಕೆ ಸೇರುವಂತೆ ಬಿಜೆಪಿಯಿಂದ ಆಹ್ವಾನ ಬಂದಿಲ್ಲ. ಸೇರಿಸಿಕೊಳ್ಳಿ ಎಂದು ನಾನೂ ಕೇಳಿಲ್ಲ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ’ ಎಂದು ರತ್ನಪ್ರಭಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.