
ಬೆಂಗಳೂರು: ‘ಸದನದಲ್ಲಿ ನಮ್ಮ ಸಚಿವರೇ ಇರುವುದಿಲ್ಲ. ಸಚಿವರು ಸದನಕ್ಕೆ ತಪ್ಪದೇ ಹಾಜರಾಗಬೇಕು. ಸಚಿವರಿಲ್ಲ ಎಂದು ಸದನದಲ್ಲಿ ವಿರೋಧ ಪಕ್ಷಗಳ ಸದಸ್ಯರು ಗಲಾಟೆ ಮಾಡದಂತೆ ನೋಡಿಕೊಳ್ಳಬೇಕು. ಅಧಿವೇಶನ ನಡೆಯುವಾಗ ಸಚಿವರು ಅಧಿಕೃತ ಸಭೆಗಳನ್ನು ನಡೆಸಬಾರದು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ರ‍್ಯಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ಬುಧವಾರ ರಾತ್ರಿ ಸಭೆ ನಡೆಯಿತು.
ವಿಧಾನ ಪರಿಷತ್ ಸದಸ್ಯರು ವಿಶೇಷ ಅನುದಾನ ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದರು. ಅಲ್ಲದೆ, ಬೆಂಗಳೂರಿನಲ್ಲಿ ಎರಡು ವರ್ಷ ಪೂರ್ಣಗೊಳಿಸಿರುವ ಕೆಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಬೇಕೆಂದು ಕೆಲವು ಶಾಸಕರು ವಿಷಯ ಪ್ರಸ್ತಾಪಿಸಿದರು. ಅಧಿವೇಶನ ಮುಗಿದ ನಂತರ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು ಎಂದು ಗೊತ್ತಾಗಿದೆ.
‘ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಪಡಿಸುವ ವಿಚಾರ ಕೋರ್ಟ್‌ನಲ್ಲಿದೆ. ಈ ಬಗ್ಗೆ ತೀರ್ಪು ಬಂದ ಬಳಿಕ ಎಲ್ಲ ಚುನಾವಣೆ ನಡೆಸಲಾಗುವುದು. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡುವ ಅಗತ್ಯ ಇಲ್ಲ. ಯಾರೊ ಅಧಿಕಾರಿ ಹೇಳಿದ್ದಾನೆಂಬ ಆರೋಪ ಹೊರಿಸಿ ರಾಜೀನಾಮೆ ಕೇಳುವುದು ಸರಿಯಲ್ಲ’ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು ಎಂದೂ ತಿಳಿದುಬಂದಿದೆ.
ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನ ವಿಚಾರವೂ ಪ್ರಸ್ತಾಪವಾಯಿತು. ಅನುದಾನ ದುರ್ಬಳಕೆಯಿಂದ ಸರ್ಕಾರಕ್ಕೆ ಕಳಂಕ ಬರುತ್ತಿದೆ. ಹೀಗಾಗಿ ಸಮರ್ಪಕವಾಗಿ ಅನುದಾನ ಬಳಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂಬ ಶಾಸಕರ ಬೇಡಿಕೆಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಗೊತ್ತಾಗಿದೆ.
ನರೇಗಾ ಬಗೆಗಿನ ಚರ್ಚೆ ತಪ್ಪಿಸಲೆಂದೇ ವಿರೋಧ ಪಕ್ಷದವರು ಕಾಲ ಹರಣ ಮಾಡುತ್ತಿದ್ದಾರೆ. ಜಿಎಸ್‌ಟಿ ಕಡಿತದಿಂದ ತೊಂದರೆಯಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಸತತವಾಗಿ ಅನ್ಯಾಯ ಆಗುತ್ತಿದ್ದರೂ ರಾಜ್ಯದ ಬಿಜೆಪಿ ಸಂಸದರು ಚಕಾರ ಎತ್ತುತ್ತಿಲ್ಲ. ಆದರೂ ಹಣಕಾಸು ನಿರ್ವಹಣೆ ಮಾಡುತ್ತಿದ್ದೇವೆ. ಬಜೆಟ್ ಅಧಿವೇಶನ ಮಾರ್ಚ್‌ನಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು ಎಂದೂ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.