ADVERTISEMENT

ರಾತ್ರಿಯಿಡಿ ಆಸ್ಪತ್ರೆ ಮುಂದೆ ಕಾದ ಕಸ್ತೂರಿ ಶಂಕರ್ ಕುಟುಂಬ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 17:51 IST
Last Updated 18 ಏಪ್ರಿಲ್ 2021, 17:51 IST
ಕಸ್ತೂರಿ ಶಂಕರ್‌
ಕಸ್ತೂರಿ ಶಂಕರ್‌   

ಬೆಂಗಳೂರು: ಖ್ಯಾತ ಗಾಯಕಿ ಕಸ್ತೂರಿ ಶಂಕರ್ ಅವರು ಕೊರೊನಾ ಸೋಂಕಿತ ತಮ್ಮ ಪತಿಗೆ ಚಿಕಿತ್ಸೆ ಒದಗಿಸಲು ಸರ್ಜಾ‍ಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಆವರಣದಲ್ಲಿ ಇಡೀ ರಾತ್ರಿ ಕಾದು, ಅಲ್ಲಿ ದಾಖಲಿಸಿಕೊಳ್ಳದ ಕಾರಣ ಪತಿಯನ್ನು ಮುಂಜಾನೆ ವಾಪಸ್‌ ಮನೆಗೆ ಕರೆತಂದಿದ್ದಾರೆ.

ಅವರ ಪುತ್ರ ಮತ್ತು ಮೊಮ್ಮಗ ಕೂಡ ಕೋವಿಡ್‌ ಪೀಡಿತರಾಗಿದ್ದು, ಅವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಸಂಪರ್ಕದಲ್ಲಿದ್ದ ಶಂಕರ್ ಅವರು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಶನಿವಾರ ರಾತ್ರಿ 8 ಗಂಟೆಗೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತು. ಅವರ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಇಳಿಕೆಯಾದ ಕಾರಣ ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದರು. ಬಿಬಿಎಂಪಿ ಸಿಬ್ಬಂದಿ ಸರ್ಜಾಪುರದ ಕೊಲಂಬಿಯಾ ಆಸ್ಪತ್ರೆಯಲ್ಲಿ ಹಾಸಿಗೆ ಹಂಚಿಕೆಯಾಗಿದೆ ಎಂಬ ಸಂದೇಶ ರವಾನಿಸಿದ ಕಾರಣ ಅಲ್ಲಿಗೆ ಕರೆದೊಯ್ದರು. ಆದರೆ, ಹಾಸಿಗೆಗಳು ಭರ್ತಿಯಾಗಿವೆ ಎಂಬ ಕಾರಣ ನೀಡಿ, ಆಸ್ಪತ್ರೆಯವರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಇದರಿಂದಾಗಿ ಸದ್ಯ ಅವರ ಪತಿಗೆ ಮನೆಯಲ್ಲಿಯೇ ಆರೈಕೆ ಮಾಡಲಾಗುತ್ತಿದೆ.

‘ಕುಟುಂಬದ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಶಂಕರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಲ್ಲಿ ಶುಲ್ಕ ಅಧಿಕವಾಗುತ್ತದೆ ಎಂಬ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿರಲಿಲ್ಲ. ಆದರೆ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಇಳಿಕೆಯಾದ ಕಾರಣ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದೆವು. ಕುಟುಂಬದ ಆಪ್ತರು ಅದಾಗಲೇ ಕೆಲ ಆಸ್ಪತ್ರೆಯಲ್ಲಿ ವಿಚಾರಿಸಿ, ಹಾಸಿಗೆ ಕಾಯ್ದಿರಿಸಿದ್ದರು. ಬಿಬಿಎಂಪಿಯಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಹಾಸಿಗೆ ಹಂಚಿಕೆ ಆಗಿದೆ ಎಂಬ ಸಂದೇಶ ಬಂದ ಕಾರಣ ಅಲ್ಲಿಗೆ ಹೊರಡಲು ಸನ್ನದರಾದೆವು. ಆಂಬುಲೆನ್ಸ್‌ಗಾಗಿ 108 ಸಹಾಯವಾಣಿಗೆ ಕರೆ ಮಾಡಿ ಒಂದು ಗಂಟೆಯಾದರೂ ಆಂಬುಲೆನ್ಸ್‌ ಬರಲಿಲ್ಲ. ಬಳಿಕ ಖಾಸಗಿ ಆಂಬುಲೆನ್ಸ್‌ನಲ್ಲಿ ರಾತ್ರಿ 11 ಗಂಟೆಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ಕಸ್ತೂರಿ ಶಂಕರ್ ತಿಳಿಸಿದರು.

ADVERTISEMENT

‘ಆಸ್ಪತ್ರೆಗೆ ತಲುಪಿದಾಗ ರಾತ್ರಿ 12 ಗಂಟೆಯಾಗಿತ್ತು. ಅಲ್ಲಿ ಹಲವಾರು ಸೋಂಕಿತರು ದಾಖಲಾತಿಗಾಗಿ ಎದುರು ನೋಡುತ್ತಿದ್ದರು. ಬೆಳಿಗ್ಗೆ 3 ಗಂಟೆಯವರೆಗೂ ಅಲ್ಲಿಯೇ ಕಾಯಲಾಯಿತು. ಆಮೇಲೆ ಹಾಸಿಗೆ ಖಾಲಿಯಿಲ್ಲ ಎಂದು ಎಲ್ಲರನ್ನೂ ಆಸ್ಪತ್ರೆ ಸಿಬ್ಬಂದಿ ವಾಪಸ್ ಕಳಿಸಿದರು. ಮುಂಜಾನೆ ಮನೆಗೆ ಬಂದಾಗ 4 ಗಂಟೆಯಾಗಿತ್ತು. ಖಾಸಗಿ ಆಂಬುಲೆನ್ಸ್‌ಗೆ ₹ 11 ಸಾವಿರ ನೀಡಲಾಯಿತು. ಈಗ ಅವರಿಗೆ ಮನೆಯಲ್ಲಿಯೇ ಆರೈಕೆ ಮಾಡಲಾಗುತ್ತಿದೆ. ಅಲ್ಲಿಗೆ ಹೋಗುವ ಮೊದಲೇ ಹಾಸಿಗೆ ಇಲ್ಲ ಎಂದು ಹೇಳಿದಲ್ಲಿ ಇಷ್ಟು ಸಮಸ್ಯೆಯಾಗುತ್ತಿರಲಿಲ್ಲ. ನಮ್ಮ ಹಾಗೇ ಹಲವಾರು ಮಂದಿ ಸಮಸ್ಯೆ ಎದುರಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗೆ ಪತ್ರವನ್ನೂ ಬರೆದಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕುರಿತ ಪ್ರತಿಕ್ರಿಯೆಗೆ ಸರ್ಜಾಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.