ADVERTISEMENT

ಸಂತ್ರಸ್ತರಿಗೆ ಪಕ್ಷದಿಂದ ಪರಿಹಾರ: ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 2:51 IST
Last Updated 28 ಆಗಸ್ಟ್ 2022, 2:51 IST
Relief from the party to the victims: HD Kumaraswamy
Relief from the party to the victims: HD Kumaraswamy   

ಚನ್ನಪಟ್ಟಣ: ಮಳೆಯಿಂದ ಹಾನಿಗೊಳಗಾದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಜೊತೆಗೆ ಜೆಡಿಎಸ್ ಪಕ್ಷದಿಂದ ಪರಿಹಾರ ಕೊಡಲಾಗುವುದು ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ, ಜನರ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಳೆ ಸಂತ್ರಸ್ತರಿಗೆ ಸರ್ಕಾರದಿಂದ ನೀಡುವ ಎರಡು ಮೂರು ಸಾವಿರ ರೂಪಾಯಿ ಹಣ ಸಾಕಾಗುವುದಿಲ್ಲ. ಸರ್ಕಾರಿ ಪರಿಹಾರದ ಜೊತೆಗೆ ಜೆಡಿಎಸ್ ಪಕ್ಷದಿಂದ ವತಿಯಿಂದ ಪರಿಹಾರ ನೀಡುತ್ತೇವೆ’ ಎಂದರು.

‘ಬೆಳಿಗ್ಗೆಯಿಂದಲೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತಾಡಿದ್ದೇನೆ. ತಕ್ಷಣವೇ ₹10 ಸಾವಿರ ಪರಿಹಾರ ನೀಡಲು ಸೂಚನೆ ನೀಡಿದ್ದೇನೆ. ಹತ್ತು ಸಾವಿರ ಚೆಕ್ ಅನ್ನು ಇಂದೇ ತಲುಪಿಸುವುದಾಗಿ ಹೇಳಿದ್ದಾರೆ. ಕುರಿ, ಕೋಳಿ, ಬೆಳೆ ಹಾನಿಗಳಿಗೂ ಪರಿಹಾರ ನೀಡಲು ಸೂಚಿಸಿದ್ದೇನೆ’ ಎಂದರು.

ADVERTISEMENT

‘ಕೋಲೂರು ಗಾಂಧಿ ಗ್ರಾಮ, ತಿಟ್ಟಮಾರನಹಳ್ಳಿ ಸೇರಿದಂತೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಪಕ್ಷದಿಂದ ಪರಿಹಾರ ನೀಡುವ ವ್ಯವಸ್ಥೆ ಮಾಡಿದ್ದೇನೆ. ಕಳೆದ ಬಾರಿಯೂ ವೈಯಕ್ತಿಕವಾಗಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿದ್ದೇವೆ. ಕಳೆದ ವರ್ಷ ಪಕ್ಷದಿಂದ ₹15 –20 ಲಕ್ಷ ಪರಿಹಾರ ನೀಡಲಾಗಿತ್ತು’ ಎಂದು ತಿಳಿಸಿದರು.

ಅವೈಜ್ಞಾನಿಕ ಕಾಮಗಾರಿ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹಲವು ಅವೈಜ್ಞಾನಿಕ ಕಾಮಗಾರಿಗಳು ನಡೆದಿವೆ ಎಂದು ಎಚ್‌.ಡಿ.ಕುಮಾರಸ್ವಾಮಿ

‘ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಈ ಯೋಜನೆ ತ್ವರಿತಗತಿಯಲ್ಲಿ ಆಗಬೇಕೆಂದು ಸಭೆ ನಡೆಸಿದ್ದೆ. ಕೇಂದ್ರ ಸರ್ಕಾರದ ಮಟ್ಟದಲ್ಲೇ ತಪ್ಪುಗಳನ್ನು ಸರಿಪಡಿಸುವ ನಿರ್ಧಾರವಾಗಬೇಕು. ಬೆಂಗಳೂರು ಮೈಸೂರು ಹೆದ್ದಾರಿ ಕೇಂದ್ರ ಸರ್ಕಾರದ ಯೋಜನೆಯಾದ ಕಾರಣ ಪ್ರತಿಯೊಂದು ಅಲ್ಲಿಯೆ ನಿರ್ಧಾರ ಆಗಬೇಕು’ ಎಂದರು.

‘ಕಾಮಗಾರಿಯ ತಾಂತ್ರಿಕ ತೊಂದರೆ ಸರಿಪಡಿಸಿಕೊಳ್ಳಲು ಕೇಂದ್ರದ ಅನುಮತಿ ಬೇಕಿದೆ. ಈ ಬಗ್ಗೆ ಖಡಾಖಂಡಿತವಾಗಿ ಕೇಂದ್ರದ ಗಮನ ಸೆಳೆಯುವ ಉದ್ದೇಶದಿಂದ ಸೆ.5 ರಂದು ದೆಹಲಿಗೆ ಭೇಟಿ ನೀಡಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನ ಭೇಟಿ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.