ADVERTISEMENT

ಪಠ್ಯದಿಂದ ಟಿಪ್ಪು ಹೊರಕ್ಕೆ: ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 19:13 IST
Last Updated 31 ಅಕ್ಟೋಬರ್ 2019, 19:13 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ಶಾಲಾ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಅಧ್ಯಾಯ ತೆಗೆದು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಯ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ವಾಕ್ಸಮರ ಮುಂದುವರಿದಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಪರ– ವಿರೋಧ ಚರ್ಚೆಗಳು ಆರಂಭವಾಗಿವೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ಟಿಪ್ಪು ಪರಿಚಯಿಸುವ ಪಾಠವನ್ನು ಪಠ್ಯದಿಂದ ತೆಗೆದು ಹಾಕಲಾಗುವುದು. ಇದರಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಟಿಪ್ಪು ವಿಚಾರಗಳನ್ನು ಪಠ್ಯದಿಂದ ಹೊರಗಿಡಬೇಕೆ? ಬೇಡವೆ? ಎಂಬ ಬಗ್ಗೆ ನಿರ್ಧರಿಸಲು ಶಿಕ್ಷಣ ಸಚಿವ ಎಸ್.
ಸುರೇಶ್ ಕುಮಾರ್ ಸಮಿತಿ ರಚಿಸಿದ್ದಾರೆ. ವರದಿ ನೀಡಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ದೇಶದ ಸಂಸ್ಕೃತಿಯಲ್ಲ: (ಪಡುಬಿದ್ರಿ ವರದಿ): ಮತಾಂಧ, ದುರಂಹಕಾರಿಯಾಗಿದ್ದ ಟಿಪ್ಪುವಿನ ಕುರಿತು ಇರುವ ಪಠ್ಯ ವಿಷಯವನ್ನು ಮಕ್ಕಳಿಗೆ ಕಲಿಸುವುದು ಈ ದೇಶದ ಸಂಸ್ಕೃತಿಯಲ್ಲ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮೂರ್ಖರನ್ನು ಏನೆಂದು ಕರೆಯುವುದು?

ಟಿಪ್ಪು ಹೆಸರನ್ನು ಪಠ್ಯದಿಂದ ಅಳಿಸಲು ಹೊರಟಿದ್ದಾರೆ. ಇಂತಹ ಮೂರ್ಖರನ್ನು ಏನೆಂದು ಕರೆಯುವುದು? ಮಾಜಿ ರಾಷ್ಟ್ರಪತಿ ದಿ.ಡಾ.ಅಬ್ದುಲ್ ಕಲಾಂ ಅವರು ‘ವಿಂಗ್ಸ್ ಆಫ್ ಫೈಯರ್’ ಪುಸ್ತಕದಲ್ಲಿ ಟಿಪ್ಪು ಬಗ್ಗೆ ಬರೆದಿದ್ದಾರೆ. ವಿರೋಧಿಸುವವರು ಕಲಾಂ ಏನೆಲ್ಲ ಬರೆದಿದ್ದಾರೆ ಎಂಬುದನ್ನು ಮೊದಲು ಓದಿಕೊಳ್ಳಲಿ. ಟಿಪ್ಪು ರೂಪಿಸಿದ ರಾಕೇಟ್ ತಂತ್ರಜ್ಞಾನವನ್ನು ‘ನಾಸಾ’ದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆಎಂದು ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.

ಟಿಪ್ಪು ಹಲವು ಯೋಜನೆ ಕೊಟ್ಟಿದ್ದಾರೆ. ರೇಷ್ಮೆ ಪರಿಚಯಿಸಿ, ಪಂಚವಾರ್ಷಿಕ ಯೋಜನೆ ಜಾರಿಮಾಡಿದ್ದರು. ಇಂತಹವರ ಇತಿಹಾಸ ತಿರುಚಲು ಹೊರಟಿರುವುದು ನಾಚಿಗೇಡಿನ ಸಂಗತಿ. ಅದೇ ರೀತಿ ಇಂದಿರಾ ಗಾಂಧಿ ಇತಿಹಾಸ ತಿರುಚಲು ಹೊರಟಿದ್ದರು ಎಂದು ಆರೋಪಿಸಿದರು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಟಿಪ್ಪು ಕುರಿತು ಇತಿಹಾಸ ಹೇಗಿದೆಯೋ ಹಾಗೆಯೇ ಉಳಿಯಬೇಕು. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ರಾಜಕೀಯ ಕಾರಣಕ್ಕೆ ದ್ವೇಷ ಮಾಡುತ್ತಿದೆ. ಪಠ್ಯ ಬೇಕೋ, ಬೇಡವೋ ಎಂದು ನಿರ್ಧರಿಸಲು ಸಮಿತಿ ರಚಿಸಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಇತಿಹಾಸದಿಂದ ಭವಿಷ್ಯ ನಿರ್ಧಾರವಾಗುತ್ತದೆ. ಚರಿತ್ರೆಯನ್ನು ತಿರುಚಿದರೆ ಅದಕ್ಕೆ ಅಪಚಾರ ಮಾಡಿದಂತಾಗುತ್ತದೆ. ಹೈದರಾಲಿ, ಟಿಪ್ಪು ಇಲ್ಲದೆ ಮೈಸೂರು ರಾಜ್ಯ ಅಪೂರ್ಣವಾಗುತ್ತದೆ’ ಎಂದರು.

**

ನಾಯಿ ಬೊಗಳಿದರೆ...

‘ಮುಂದಿನ ಪೀಳಿಗೆಯ ಮಕ್ಕಳಿಗೆ ಯಾವ ಇತಿಹಾಸ ಕೊಡಲು ಬಿಜೆಪಿ ಹೊರಟಿದೆ? ಗಣಿ ಹಗರಣದ ವಿಚಾರವೇ, ಆಪರೇಷನ್‌ ಕಮಲದ ವಿಷಯವೇ ಅಥವಾ ಯಡಿಯೂರಪ್ಪ ಜೈಲಿಗೆ ಹೋಗಿ ಬಂದ ಇತಿಹಾಸ ಓದಬೇಕೆ?’ ಎಂದು ಶಾಸಕ ತನ್ವೀರ್‌ ಸೇಠ್‌ ತಿರುಗೇಟು ನೀಡಿದರು.

‘ಪಠ್ಯ ಪುಸ್ತಕದಿಂದ ಟಿಪ್ಪು ಕುರಿತ ವಿಚಾರವನ್ನು ಬಿಜೆಪಿಯವರು ತೆಗೆಯಬಹುದು. ಆದರೆ, ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಟಿಪ್ಪು ಸದಾ ಜೀವಂತವಾಗಿ ಇರುತ್ತಾರೆ. ಆನೆ ಹೋಗುವಾಗ ನಾಯಿ ಬೊಗಳಿದರೆ ಏನೂ ಆಗುವುದಿಲ್ಲ’ ಎಂದರು.

ಆತುರದ ನಿರ್ಧಾರ: ಪ್ರಸಾದ್

‘ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ಟಿಪ್ಪು ವಿಚಾರ ಏಕೆ ಕೈಗೆತ್ತಿಕೊಂಡಿದ್ದಾರೆ? ಪಠ್ಯದಿಂದ ಟಿಪ್ಪು ವಿಚಾರ ಕೈಬಿಡುವ ನಿರ್ಧಾರ ಆತುರದ್ದು’ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಟೀಕಿಸಿದರು.

‘ಟಿಪ್ಪು ವಿಚಾರದಲ್ಲಿ ಮುಖ್ಯಮಂತ್ರಿ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳಬಹುದಿತ್ತು. ಬಿಜೆಪಿಗೆ ಈಗಾಗಲೇ ಕೋಮುವಾದಿ ಪಕ್ಷ ಎಂಬ ಆರೋಪವಿದೆ. ಅದನ್ನು ಅಳಿಸಿ ಹಾಕುವ ರೀತಿಯಲ್ಲಿ ಸರ್ಕಾರದ ನಡೆ ಇರಬೇಕಾಗಿತ್ತು. ಟಿಪ್ಪು ಬಗ್ಗೆ ಸಾಕಷ್ಟು ಜಿಜ್ಞಾಸೆಗಳಿವೆ. ಒಬ್ಬೊಬ್ಬ ಇತಿಹಾಸಕಾರ ಒಂದೊಂದು ರೀತಿ ಉಲ್ಲೇಖಿಸಿದ್ದಾರೆ. ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸುವ ಮುನ್ನ ಪರಾಮರ್ಶೆ ನಡೆಸಬೇಕಾಗಿತ್ತು’ ಎಂದರು.

ಟಿಪ್ಪು ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ಸತ್ಯವನ್ನು ಹೇಳುವ ಕೆಲಸ ಮಾಡೇ ಮಾಡುತ್ತೇವೆ. ಸುಮ್ಮನೆ ಕೂರುವ ಪಕ್ಷ ನಮ್ಮದಾಗಬಾರದು.
ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.