ADVERTISEMENT

ಮನೆ ಊಟ ಕೋರಿಕೆ: ಅರ್ಜಿ ವಾಪಸು ಪಡೆದ ದರ್ಶನ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 23:41 IST
Last Updated 29 ಜುಲೈ 2024, 23:41 IST
<div class="paragraphs"><p>ದರ್ಶನ್‌</p></div>

ದರ್ಶನ್‌

   

ಬೆಂಗಳೂರು: ‘ಮನೆ ಊಟ ಪಡೆಯಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಬೇಕು’ ಎಂದು ಕೋರಿರುವ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಶ್ರೀನಿವಾಸ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ತಮ್ಮ ರಿಟ್‌ ಅರ್ಜಿಯನ್ನು ವಾಪಸು ಪಡೆದರು.

ಈ ಕುರಿತ ಅರ್ಜಿಯು ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ಸೋಮವಾರ ವಿಚಾರಣೆಗೆ ನಿಗದಿಯಾಗಿತ್ತು. ದರ್ಶನ್‌ ಪರ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ಅರ್ಜಿ ವಾಪಸು ಪಡೆದು ತಿದ್ದುಪಡಿ ಮಾಡಿದ ಹೊಸ ಅರ್ಜಿ ಸಲ್ಲಿಸಲಾಗುವುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಿತು.

ADVERTISEMENT

‘ಕರ್ನಾಟಕ ಬಂದಿಖಾನೆ ಕಾಯ್ದೆ–1963ರ ಕಲಂ 30ರ ಅಡಿ ವಿಚಾರಣಾಧೀನ ಕೈದಿ ಮನೆ ಊಟ, ಹಾಸಿಗೆ ಇತ್ಯಾದಿ ಪಡೆಯಲು ಅರ್ಹರಾಗಿರುತ್ತಾರೆ. ನನಗೆ ಜೈಲಿನ ಊಟದಿಂದ ಆರೋಗ್ಯದಲ್ಲಿ ವ್ಯತ್ಯಯವುಂಟಾಗಿದೆ. ಹಾಗಾಗಿ, ಮನೆ ಊಟ ಪಡೆಯಲು ನಿರ್ದೇಶಿಸಬೇಕು’ ಎಂಬುದು ದರ್ಶನ್‌ ಕೋರಿಕೆ. ಅರ್ಜಿಯ ಈ ಹಿಂದಿನ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಈ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲೇ ಸಲ್ಲಿಸಿ ಪರಿಹಾರ ಪಡೆಯಿರಿ’ ಎಂದು ದರ್ಶನ್‌ ಪರ ವಕೀಲರಿಗೆ ನಿರ್ದೇಶಿಸಿತ್ತು. ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಅರ್ಜಿ ಮಾನ್ಯ ಮಾಡಲು ನಿರಾಕರಿಸಿತ್ತು. ಪ್ರಾಸಿಕ್ಯೂಷನ್‌ ಪರ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.