ಬೆಂಗಳೂರು: ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರಿಗೆ ದೇಶದಾದ್ಯಂತ ಮುಕ್ತ ಸಂಚಾರಕ್ಕೆ ಅನುಮತಿ ನೀಡಿರುವ ಹೈಕೋರ್ಟ್, ‘ಪ್ರವಾಸ ಕೈಗೊಳ್ಳುವುದಕ್ಕೂ ಮೊದಲು ಸಕ್ಷಮ ನ್ಯಾಯಾಲಯದ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಆದೇಶಿಸಿದೆ.
‘ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೇ ವ್ಯಾಪ್ತಿ ಪ್ರದೇಶವನ್ನು ದಾಟಿ ಹೊರಗೆ ಹೋಗುವಂತಿಲ್ಲ ಎಂದು ಜಾಮೀನು ಮಂಜೂರು ಮಾಡುವಾಗ ವಿಧಿಸಲಾಗಿರುವ ಐದನೇ ಷರತ್ತಿನಲ್ಲಿ ಸಡಿಲಿಕೆ ಮಾಡಬೇಕು’ ಎಂದು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ ಪೀಠ) ಭಾಗಶಃ ಪುರಸ್ಕರಿಸಿದೆ.
ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ದರ್ಶನ್‌ಗೆ ಜಾಮೀನು ಮಂಜೂರು ಮಾಡುವಾಗ ಸಕ್ಷಮ ನ್ಯಾಯಾಲಯದ ಅನುಮತಿ ಇಲ್ಲದೇ ವ್ಯಾಪ್ತಿ ಪ್ರದೇಶವನ್ನು ತೊರೆಯುವಂತಿಲ್ಲ ಎಂದು ಹೈಕೋರ್ಟ್ ವಿಧಿಸಿರುವ ಷರತ್ತು ಸಮಸ್ಯೆ ಉಂಟು ಮಾಡಿದೆ. ವೃತ್ತಿ ದೃಷ್ಟಿಯಿಂದ ಅವರು ರಾಜ್ಯವಲ್ಲದೇ ವಿದೇಶಕ್ಕೂ ಪ್ರಯಾಣಿಸುವ ಅಗತ್ಯವಿದೆ. ಈ ಸಂಬಂಧ ಪ್ರವಾಸ ಪಟ್ಟಿ ಮತ್ತು ಮೆಮೊ ಸಲ್ಲಿಸಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.
ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್, ‘ವಿದೇಶ ಪ್ರವಾಸ ಕೈಗೊಳ್ಳುವಾಗ ದರ್ಶನ್ ಸಕ್ಷಮ ನ್ಯಾಯಾಲಯದ ಅನುಮತಿ ಕೋರಬೇಕು ಎಂಬಷ್ಟರ ಮಟ್ಟಿಗೆ ಷರತ್ತಿನಲ್ಲಿ ಮಾರ್ಪಾಡು ಮಾಡಬಹುದು’ ಎಂದು ತಿಳಿಸಿದ್ದರು. ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ ಷರತ್ತು ಸಡಿಲಿಕೆಗೆ ಅನುಮತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.