ADVERTISEMENT

Renukaswamy Murder Case: ಯಾರ್‍ಯಾರ ಜಾಮೀನು ಆದೇಶ ರದ್ದು?

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 1:25 IST
Last Updated 15 ಆಗಸ್ಟ್ 2025, 1:25 IST
   

2024ರ ಜೂನ್‌ 9ರಂದು ಬೆಂಗಳೂರಿನ ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಬಳಿಯ ಮೋರಿ ಬಳಿ ರೇಣುಕಸ್ವಾಮಿ ಅವರ ಮೃತದೇಹ ಪತ್ತೆಯಾಗಿತ್ತು. ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು, 17 ಮಂದಿ ಆರೋಪಿಗಳನ್ನು ಜೂನ್‌ 10ರಂದು ಪೊಲೀಸರು ಬಂಧಿಸಿದ್ದರು.

ಎಲ್ಲ ಆರೋಪಿಗಳೂ ಜಾಮೀನಿನ ಮೇಲೆ ಕೆಲವು ತಿಂಗಳ ಹಿಂದೆ ಬಿಡುಗಡೆ ಆಗಿದ್ದರು. 17 ಆರೋಪಿಗಳ ಪೈಕಿ ಏಳು ಆರೋಪಿಗಳ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್‌ ಗುರುವಾರ ರದ್ದುಗೊಳಿಸಿದೆ.

ಯಾರ್‍ಯಾರ ಜಾಮೀನು ಆದೇಶ ರದ್ದು?

ಆರೋಪಿ 1: ಪವಿತ್ರಾಗೌಡ (33), ದರ್ಶನ್‌ ಗೆಳತಿ, ರಾಜರಾಜೇಶ್ವರಿ ನಗರ, ಬೆಂಗಳೂರು

ADVERTISEMENT

– ಉತ್ತರ ಪ್ರದೇಶದ ಸಂಜಯ್‌ ಸಿಂಗ್ ಅವರು ಬೆಂಗಳೂರಿನಲ್ಲಿ ಐ.ಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿ ಇದ್ದರು. ಆಗ ಸಂಜಯ್‌ ಸಿಂಗ್‌ ಹಾಗೂ ಪವಿತ್ರಾ ಪ್ರೀತಿಸಿ ಮದುವೆ ಆಗಿದ್ದರು. 2013ರಲ್ಲಿ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರು. ನಂತರ, ಪವಿತ್ರಾಗೆ ಸಿನಿಮಾ ಸೆಟ್‌ವೊಂದರಲ್ಲಿ ದರ್ಶನ್‌ ಪರಿಚಯ ಆಗಿತ್ತು. ಹತ್ತು ವರ್ಷದಿಂದ ಆಪ್ತರಾಗಿದ್ದರು. ಕೊಲೆಯಾದ ರೇಣುಕಸ್ವಾಮಿ, ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು. ಈ ವಿಷಯವನ್ನು ಸಹಾಯಕ ಪವನ್‌ಗೆ ತಿಳಿಸಿದ್ದರು. ಆರೋಪಿ ಪವನ್‌ ಅವರು ದರ್ಶನ್‌ಗೆ ಮಾಹಿತಿ ನೀಡಿದ್ದರು. ಕೃತ್ಯಕ್ಕೆ ಸಂಚು ರೂಪಿಸಿದ್ದ ಪವಿತ್ರಾ, ಚಪ್ಪಲಿಯಲ್ಲಿ ರೇಣುಕಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎಂಬುದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

ಆರೋಪಿ 2: ದರ್ಶನ್‌ ಅಲಿಯಾಸ್‌ ಡಿ ಬಾಸ್‌ (47), ನಟ, ರಾಜರಾಜೇಶ್ವರಿ ನಗರ, ಬೆಂಗಳೂರು


– ತನ್ನ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಮಾಹಿತಿ ತಿಳಿದ ಮೇಲೆ ರೇಣುಕಸ್ವಾಮಿ ಅವರನ್ನು ಅಪಹರಿಸಲು ಸಂಚು ರೂಪಿಸಿದ್ದರು. ಚಿತ್ರದುರ್ಗದ ಅಭಿಮಾನಿಗಳಿಗೆ ಸೂಚಿಸಿದ್ದರು. ಪಟ್ಟಣಗೆರೆಯ ಶೆಡ್‌ಗೆ ರೇಣುಕಸ್ವಾಮಿ ಕರೆತಂದಾಗ ಕಾಲಿನಿಂದ ಒದ್ದಿದ್ದರು. ಪವಿತ್ರಾ ಅವರ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದ್ದರು. ಅಲ್ಲದೇ ಕೊಲೆ ಪ್ರಕರಣ ಮುಚ್ಚಿ ಹಾಕಲು ನಾಲ್ಕು ಮಂದಿಯನ್ನು ಪೊಲೀಸರಿಗೆ ಶರಣಾಗುವಂತೆ ಸುಪಾರಿ ನೀಡಿದ್ದರು. ಈ ಅಂಶಗಳನ್ನು ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 

ಆರೋಪಿ 6: ಜಗದೀಶ್ ಅಲಿಯಾಸ್‌ ಜಗ್ಗ (36), ಆಟೊ ಚಾಲಕ, ಚಿತ್ರದುರ್ಗ


– ಜಗದೀಶ ಚಿತ್ರದುರ್ಗದಲ್ಲಿ ಆಟೊ ಚಾಲಕ. ರೇಣುಕಸ್ವಾಮಿಯನ್ನು ಅಪಹರಿಸಿಕೊಂಡು ಕಾರಿನಲ್ಲಿ ಬೆಂಗಳೂರಿಗೆ ಕರೆ ತಂದಿದ್ದರು.

ಆರೋಪಿ 7: ಅನುಕುಮಾರ್ (25), ಆಟೊ ಚಾಲಕ ಚಿತ್ರದುರ್ಗ


ಚಿತ್ರದುರ್ಗದಲ್ಲಿ ಆಟೊ ಚಾಲಕ. ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಅಪಹರಿಸಲು ಜಗದೀಶ್‌ಗೆ ನೆರವು.

ಆರೋಪಿ 12: ಎಂ.ಲಕ್ಷ್ಮಣ್‌ (54), ದರ್ಶನ್‌ ಕಾರು ಚಾಲಕ, ಆರ್‌ಪಿಸಿ ಲೇಔಟ್‌, ಬೆಂಗಳೂರು


– ದರ್ಶನ್‌ ಅವರ ಕಾರು ಚಾಲಕ. ಬೆಂಗಳೂರಿನ ಆರ್‌ಪಿಸಿ ಲೇಔಟ್‌ನಲ್ಲಿ ನೆಲಸಿದ್ದರು. ಕೃತ್ಯ ನಡೆದಿದ್ದ ಸ್ಥಳದಲ್ಲಿದ್ದರು. ಕೊಲೆ ಪ್ರಕರಣದಲ್ಲಿ ದರ್ಶನ್‌ ರಕ್ಷಣೆಗೆ ಮುಂದಾಗಿದ್ದರು. ಪೊಲೀಸ್‌ ಠಾಣೆಗೆ ತೆರಳಿ  ಶರಣಾಗುವಂತೆ ನಾಲ್ವರಿಗೆ ಹಣ ನೀಡಿದ್ದರು.

ಆರೋಪಿ 11: ಆರ್‌. ನಾಗರಾಜ್‌ (41), ದರ್ಶನ್‌ ಕಾರು ಚಾಲಕ, ರಾಮಕೃಷ್ಣನಗರ, ಮೈಸೂರು


– ಮೈಸೂರು ರಾಮಕೃಷ್ಣ ನಗರದ ನಿವಾಸಿ. 15 ವರ್ಷಗಳಿಂದ ದರ್ಶನ್‌ ಅವರ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿನಲ್ಲಿರುವ ದರ್ಶನ್‌ ಅವರ ಫಾರಂ ಹೌಸ್‌ನಲ್ಲಿ ಇರುತ್ತಿದ್ದರು. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ. ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು.

ಆರೋಪಿ 14: ಪ್ರದೂಷ್‌ ರಾವ್‌ (40), ದರ್ಶನ್ ಸ್ನೇಹಿತ, ಉದ್ಯಮಿ, ಜೆಸಿ ರಸ್ತೆ, ಗಿರಿನಗರ, ಬೆಂಗಳೂರು


– ಬೆಂಗಳೂರಿನ ಗಿರಿನಗರದ ನಿವಾಸಿ. ದರ್ಶನ್ ಸ್ನೇಹಿತ. ಕೊಲೆ ಪ್ರಕರಣದಲ್ಲಿ ದರ್ಶನ್‌ ರಕ್ಷಣೆ ಮಾಡಲು ₹30 ಲಕ್ಷ ಪಡೆದಿದ್ದ ಇವರು, ಶರಣಾದ ನಾಲ್ವರಿಗೆ ಸಂದಾಯ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.