ಎಚ್.ಡಿ ದೇವೇಗೌಡ
ನವದೆಹಲಿ: ಜಾತಿ ಆಧಾರದ ಮೇಲೆ ಮೀಸಲಾತಿಯನ್ನು ಮುಂದುವರಿಸಬೇಕೇ ಅಥವಾ ಆರ್ಥಿಕ ಮಾನದಂಡಕ್ಕೆ ತಕ್ಕಂತೆ ಬದಲಾಯಿಸಬೇಕೇ ಎಂಬ ಬಗ್ಗೆ ಸಂಸತ್ ಚರ್ಚೆ ನಡೆಸುವ ಅಗತ್ಯ ಇದೆ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಸಲಹೆ ನೀಡಿದರು.
ರಾಜ್ಯಸಭೆಯಲ್ಲಿ ‘ಭಾರತದ ಸಂವಿಧಾನದ 75 ವರ್ಷಗಳ ವೈಭವದ ಪಯಣ’ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಈ ಹಿಂದೆ ನಾವು ನೀಡಿದ್ದ ಮೀಸಲಾತಿಯಿಂದಲೂ ಜನರ ಸ್ಥಿತಿಯಲ್ಲಿ ಭಾರಿ ಬದಲಾವಣೆ ಆಗಿಲ್ಲ. ಎರಡು ಹೊತ್ತಿನ ಊಟಕ್ಕೆ ಸಂಕಷ್ಟ ಪಡುವ ಜನರು ಇದ್ದಾರೆ’ ಎಂದರು.
ಅತ್ಯಂತ ಬಡ ರೈತನ ಮಗನಾದ ನನಗೆ ಈ ದೇಶದ ಸಂವಿಧಾನ ಎಲ್ಲವನ್ನೂ ಕೊಟ್ಟಿದೆ. ಸಂವಿಧಾನದ ಬಲದಿಂದಲೇ ನಾನು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಆಗುವಂತೆ ಆಯಿತು ಎಂದರು.
ಆಧುನಿಕ ಭಾರತವನ್ನು ರೂಪಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಸಂವಿಧಾನ ಅಸಾಧಾರಣ ಕೊಡುಗೆ ನೀಡಿದೆ. ಬಾಬಾ ಸಾಹೇಬ್ ಅವರ ನೇತೃತ್ವದಲ್ಲಿ ರಚನೆಯಾದ ನಮ್ಮ ಸಂವಿಧಾನವು ಅನೇಕ ಒತ್ತಡಗಳು ಮತ್ತು ನಮ್ಮ ಕಾಲದ ರಾಜಕೀಯವನ್ನು ತಡೆದುಕೊಂಡು ನಿಂತಿದೆ ಎಂದು ಅವರು ಹೇಳಿದರು.
ತುರ್ತು ಪರಿಸ್ಥಿತಿ ಸಂದರ್ಭವನ್ನು ನೆನಪು ಮಾಡಿಕೊಂಡ ಅವರು, ತುರ್ತು ಪರಿಸ್ಥಿತಿಯ ಕಾಲ ಕರಾಳ ಅವಧಿ. ಐವತ್ತು ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ, ಈ ರಾಷ್ಟ್ರದ ಬಹುತೇಕ ರಾಜಕೀಯ ವಿರೋಧಿಗಳೆಲ್ಲರೂ ಜೈಲು ಪಾಲಾದರು. ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದವರು ಎಲ್ಲರನ್ನೂ ಜೈಲಿಗೆ ಕಳುಹಿಸಲಾಯಿತು ಎಂದು ಹೇಳಿದರು.
‘ನನ್ನನ್ನೂ ಜೈಲಿಗೆ ಕಳುಹಿಸಲಾಯಿತು. ನನ್ನ ಸೆರೆವಾಸವು ನನ್ನ ತಂದೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಕುಟುಂಬದ ಮೇಲೆ ಮಾನಸಿಕ ಒತ್ತಡ ಉಂಟು ಮಾಡಿತು. ಕೊನೆಗೆ ಆ ನೋವಿನಲ್ಲಿಯೇ ತಂದೆಯವರು ವಿಧಿವಶರಾದರು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಮತ್ತು ತಮ್ಮ ರಾಜಕೀಯ ನಂಬಿಕೆಗಳ ಜತೆ ನಿಂತಿದ್ದ ಅನೇಕರಿಗೆ ಇದು ಆಘಾತಕಾರಿ ಸಮಯವಾಗಿತ್ತು’ ಎಂದು ದೇವೇಗೌಡರು ಭಾವುಕರಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.