ADVERTISEMENT

ಮೇಲ್ವರ್ಗದವರಿಗೆ ಮೀಸಲಾತಿ ಏಕೆ ಕೊಟ್ಟಿಲ್ಲ: ಶೆಟ್ಟರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 3:20 IST
Last Updated 12 ಏಪ್ರಿಲ್ 2019, 3:20 IST
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್   

ಹುಬ್ಬಳ್ಳಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಜಾರಿಗೆ ತಂದಿರುವ ಶೇ 10 ರಷ್ಟು ಮೀಸಲಾತಿಯನ್ನು ರಾಜ್ಯದಲ್ಲಿ ಯಾಕೆ ಇನ್ನೂ ಅನುಷ್ಠಾನಕ್ಕೆ ತಂದಿಲ್ಲ ಎಂದು ಶಾಸಕ ಜಗದೀಶ ಶೆಟ್ಟರ್ ಪ್ರಶ್ನಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಜಾರಿಗೆ ತಂದರೆ ಪ್ರಧಾನಿ ಮೋದಿಗೆ ಲಾಭವಾಗುತ್ತದೆ ಎಂದು ತಡೆ ಹಿಡಿಯಲಾಗಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮೂಲಕ ಮೀಸಲಾತಿ ಕೊಡಿಸಲು ಹೊರಟಿರುವವರು ಇಲ್ಲೇಕೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಐದು ವರ್ಷಗಳ ಕಾಲ ಮಂತ್ರಿಯಾಗಿದ್ದರು. ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಪಾಲಿಕೆಗೆ ಪಿಂಚಣಿಯ ₹ 130 ಕೋಟಿ ಕೊಡಿಸಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.

ADVERTISEMENT

ಸ್ಮಾರ್ಟ್‌ ಸಿಟಿ, ಐಐಟಿ, ವಿಮಾನ ನಿಲ್ದಾಣ ಅಭಿವೃದ್ಧಿ, ಸಿಆರ್‌ಎಫ್‌ ಅನುದಾನ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಅವರು ಏನು ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಅಲ್ಪಸಂಖ್ಯಾತರ ವೋಟರ್ ಐಡಿ ಸಂಗ್ರಹಿಸಲಾಗುತ್ತಿದೆ ಎಂದು ಸುಳ್ಳು ಆಪಾದನೆ ಮಾಡಿದ್ದಾರೆ. ನಿಜವಿದ್ದರೆ, ಒಂದೇ ಒಂದು ಸಾಕ್ಷಿ ನೀಡಲಿ ಎಂದರು.

ನ್ಯಾಯಾಲಯ ಎಫ್‌ಐಆರ್‌ ದಾಖಲಿಸಲು ಸೂಚಿಸಿದ್ದಕ್ಕೆ ಜೋಶಿ ಅವರೇ ಕಾರಣ ಎಂದು ಆಪಾದನೆ ಮಾಡುವ ಮೂಲಕ ನ್ಯಾಯಾಧೀಶರ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಸ್ವತಂತ್ರ ಧರ್ಮ, ಜಾತಿ ಬಗ್ಗೆ ಕಾಂಗ್ರೆಸ್‌ ಅಭ್ಯರ್ಥಿ ಚರ್ಚೆ ಮಾಡುತ್ತಿದ್ದಾರೆ. ಸ್ವತಂತ್ರ ಧರ್ಮಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಕಾಂಗ್ರೆಸ್‌ ನಾಯಕರು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೋರಾಟದ ಮುಂಚೂಣಿಯಲ್ಲಿದ್ದ ಸ್ವಾಮೀಜಿಯೊಬ್ಬರಿಗೆ ಹೇಳಿದ್ದೆ. ಚುನಾವಣೆ ನಂತರ ಅವರು ಈ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದಿದ್ದೆ. ಈಗ ಅವರು, ಹೋರಾಟ ಅಪ್ರಸ್ತುತ ಎನ್ನುತ್ತಿದ್ದಾರೆ. ಹೋರಾಟ ಕೈಬಿಟ್ಟಿದ್ದೀರಾ ಎಂಬುದನ್ನು ಸಚಿವ ಎಂ.ಬಿ. ಪಾಟೀಲ ಉತ್ತರಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿರುವಂತೆ ರಾಜ್ಯದಲ್ಲಿಯೂ ಪ್ರಧಾನಿ ಮೋದಿ ಪರ ಒಲುವು ಕಂಡು ಬರುತ್ತಿದೆ. ಜನರು ತಾವಾಗಿಯೇ ಮೋದಿ ಅವರನ್ನು ಪ್ರಧಾನಿಯನ್ನಾಗಿಸಬೇಕು ಎಂದು ಮುಂದಾಗಿದ್ದಾರೆ. ಹೊಸ ಮತದಾರರ ಒಲವು ದೊಡ್ಡ ಪ್ರಮಾಣದಲ್ಲಿ ವ್ಯಕ್ತವಾಗುತ್ತಿದೆ ಎಂದರು.

ರಾಜ್ಯದಲ್ಲಿ 22 ರಿಂದ 24 ಸ್ಥಾನಗಳನ್ನು ಗೆಲ್ಲುತ್ತೇವೆ. ಗುಲಬರ್ಗಾ ಹಾಗೂ ಬಳ್ಳಾರಿ ಕ್ಷೇತ್ರದಲ್ಲಿಯೂ ಈ ಬಾರಿ ಗೆಲುವು ಸಾಧಿಸಲಿದ್ದೇವೆ. ಸೋಲಿನ ಭೀತಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಬಾರಿಗೆ ಟೆಂಪಲ್‌ ರನ್‌ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಮೂವರು ಜಾಧವ್‌ರನ್ನು ನಿಲ್ಲಿಸಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.