ADVERTISEMENT

ಪೊಲೀಸರಿಗೆ ಮೊಬೈಲ್ ವಿಶ್ರಾಂತಿ ಕೊಠಡಿ: ಬೊಮ್ಮಾಯಿ

ಆರು ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್‌ ಸಿಬ್ಬಂದಿಗೆ ಮೂಲಸೌಕರ್ಯ

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:08 IST
Last Updated 25 ಮೇ 2020, 20:08 IST
ಮೊಬೈಲ್‌ ವಿಶ್ರಾಂತಿ ಕೊಠಡಿಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪರಿಶೀಲಿಸಿದರು. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್ ಜತೆಗಿದ್ದರು
ಮೊಬೈಲ್‌ ವಿಶ್ರಾಂತಿ ಕೊಠಡಿಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪರಿಶೀಲಿಸಿದರು. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್ ಜತೆಗಿದ್ದರು   

ಬೆಂಗಳೂರು: ‘ಹೊರರಾಜ್ಯಗಳಿಂದ ಬರುವ ವಲಸಿಗರು ರಾಜ್ಯದ ಗಡಿಯೊಳಗೆ ನುಸುಳದಂತೆ ತಡೆಯುವ ನಿಟ್ಟಿನಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್‌ ಸಿಬ್ಬಂದಿಗೆ ಸೌಲಭ್ಯ ಒದಗಿಸಲು ಆರು ಗಡಿಗಳಲ್ಲಿ ಮೊಬೈಲ್‌ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪಿಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಅವರು, ‘ಪೊಲೀಸ್‌ ಸಿಬ್ಬಂದಿಗೆ ಮೂಲಸೌಕರ್ಯ ಒದಗಿಸಲು ನಿಪ್ಪಾಣಿ, ಧೂಳಖೇಡ‌, ಕಲಬುರ್ಗಿ, ರಾಯಚೂರು, ವಿಜಯಪುರ ಮತ್ತು ಅತ್ತಿಬೆಲೆಯಲ್ಲಿ ವಿಶ್ರಾಂತಿ ಕೊಠಡಿ ಒದಗಿಸಲಾಗುವುದು’ ಎಂದಿದ್ದಾರೆ.

‘ಚೆಕ್‌ಪೋಸ್ಟ್‌ಗಳು ಮತ್ತು ಕಂಟೈನ್‌ಮೆಂಟ್‌‌ವಲಯಗಳಲ್ಲಿ ಕೆಲಸ ಮಾಡುವ ಪೊಲೀಸ್‌ ಸಿಬ್ಬಂದಿ ಮತ್ತು ಅವರ ಸಂಬಂಧಿಕರಿಗೆ ಕಡ್ಡಾಯವಾಗಿ ಕೋವಿಡ್‌ 19 ಪರೀಕ್ಷೆ ಮಾಡಬೇಕು. ಅಲ್ಲದೆ, ಸಿಬ್ಬಂದಿಗೆ ದಾವಣಗೆರೆಯಲ್ಲಿ ನೀಡಿದಂತೆ ಹತ್ತಿಯ ಕೈಗವಸು, ಮಾಸ್ಕ್‌, ವೈಪರ್‌ ಸಹಿತ ಹೆಡ್‌ವೈಸರ್‌, ಪಿಪಿಇ ಕಿಟ್‌ ನೀಡಬೇಕು’ ಎಂದೂ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

ADVERTISEMENT

‘ಗಡಿಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್‌ ಸಿಬ್ಬಂದಿಗೆ ಪಾಳಿ ವ್ಯವಸ್ಥೆ ಮಾಡಬೇಕು. ಸಂಚಾರ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಜಾಕೆಟ್‌, ಮಾಸ್ಕ್‌, ಹೆಡ್‌ವೈಪರ್‌, ಕೈಗವಸು ನೀಡಬೇಕು. ಪೊಲೀಸ್‌ ಠಾಣೆ ಮತ್ತು ಪೊಲೀಸ್‌ ಕಾಲೊನಿಗಳಲ್ಲಿ ಸ್ವಚ್ಛತೆ ಕಾಪಾಡಲು ಆಗಾಗ ಪ್ಲಿಮಿಗೇಷನ್‌ ಮಾಡಬೇಕು. ಜೊತೆಗೆ ರ‍್ಯಾಂಡಮ್‌ ಆಗಿ ಕೋವಿಡ್‌ ತಪಾಸಣೆ ನಡೆಸಬೇಕು’ ಎಂದು ಸಚಿವರು ಸೂಚಿಸಿದ್ದಾರೆ.

‘ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಮನೋಬಲ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಹಿರಿಯ ಅಧಿಕಾರಿಗಳಿಗೆ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.