ADVERTISEMENT

ದೇಶ ವಿಭಜಿಸುವ ಕೃತ್ಯ ಹೆಚ್ಚಳ: ಗುರುಬಚನ್ ಸಿಂಗ್ ಭುಲ್ಲರ್

ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 2:58 IST
Last Updated 30 ಡಿಸೆಂಬರ್ 2019, 2:58 IST
ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಭಾನುವಾರ ವಿಶ್ವಮಾನವ ದಿನಾಚರಣೆ ಸಮಾರಂಭದಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಂಜಾಬಿ ಸಾಹಿತಿ ಗುರುಬಚನ್ ಸಿಂಗ್ ಭುಲ್ಲರ್ ಸ್ವೀಕರಿಸಿದರು.
ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಭಾನುವಾರ ವಿಶ್ವಮಾನವ ದಿನಾಚರಣೆ ಸಮಾರಂಭದಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಂಜಾಬಿ ಸಾಹಿತಿ ಗುರುಬಚನ್ ಸಿಂಗ್ ಭುಲ್ಲರ್ ಸ್ವೀಕರಿಸಿದರು.   

ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ): ‘ದೇಶ ವಿಭಜಿಸುವ ಕೃತ್ಯಗಳು ಹೆಚ್ಚುತ್ತಿದ್ದು, ಸಾಹಿತ್ಯದ ಮೂಲಕ ದೇಶ ಕಟ್ಟುವ ಕೆಲಸ ಆಗಬೇಕಿದೆ. ಉತ್ತಮ ಕವಿಗಳು ಹೇಳುವ ಎಲ್ಲವೂ ಒಳ್ಳೆಯದೇ ಇರುತ್ತದೆ’ ಎಂದು ಪಂಜಾಬಿನ ಸಾಹಿತಿ ಗುರುಬಚನ್ ಸಿಂಗ್ ಭುಲ್ಲರ್ ಅಭಿಪ್ರಾಯಪಟ್ಟರು.

ಭಾನುವಾರ ತಾಲ್ಲೂಕಿನ ಕುಪ್ಪಳಿಯಲ್ಲಿ ನಡೆದ ವಿಶ್ವಮಾನವ ದಿನಾಚರಣೆ ಹಾಗೂ ಕುವೆಂಪು ಅವರ 115ನೇ ಜನ್ಮ ದಿನೋತ್ಸವದಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.‘

ಸಾಹಿತಿಗಳು ದುಡಿಯುವ ವರ್ಗದ ಕಡೆಗೆ ಇರುತ್ತಾರೆ. ಪಂಜಾಬಿ ಸಾಹಿತ್ಯದ ಮೂಲಪುರುಷ ಗುರುನಾನಕ್ ಕರ್ನಾಟಕದ ಬೀದರ್‌ಗೆ ಬಂದಿದ್ದರು. ಕನಕದಾಸ, ಗುರುನಾನಕ್ ಅವರ ಸಾಹಿತ್ಯದ ಆಶಯಗಳು ಒಂದೇ ಆಗಿವೆ. ಪ್ರಸ್ತುತ ಸಂದರ್ಭದಲ್ಲಿ ಪಂಜಾಬಿನ ಸಾಹಿತ್ಯ, ಕುವೆಂಪು ಸಾಹಿತ್ಯ ಬಹಳ ಮುಖ್ಯ’ ಎಂದು ಬುಲ್ಲರ್ ಹೇಳಿದರು.

ADVERTISEMENT

‘ಕುವೆಂಪು ಶ್ರೇಷ್ಠ ಸಾಹಿತಿಯಾಗಿದ್ದರೂ ಪಂಜಾಬಿ ಭಾಷೆಯಲ್ಲಿ ಅವರ ಯಾವ ಕೃತಿಗಳೂ ಲಭ್ಯವಿಲ್ಲ. ಇದು ನೋವಿನ ಸಂಗತಿ’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ, ‘ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ನಾಟಕ ಪ್ರದರ್ಶನಕ್ಕೆ ಮತ್ತೆ ಸರ್ಕಾರ ಮುಂದಾಗಬೇಕು. ಅವರನ್ನು ಚೌಕಟ್ಟಿನಲ್ಲಿ ಕೂಡಿ ಹಾಕದಂತೆ ಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.

ಗುರುಬಚನ್ ಸಿಂಗ್ ಭುಲ್ಲರ್ ಅವರಿಗೆ ಎರಡೂವರೆ ಲಕ್ಷದ ಚೆಕ್ ನೀಡಲಾಯಿತು. ಪುರಸ್ಕಾರಕ್ಕೆ ಆಯ್ಕೆಯಾದ ಮತ್ತೊಬ್ಬ ಸಾಹಿತಿ ಅಜೀತ್ ಕೌರ್ ಗೈರಾಗಿದ್ದರು. ಕವಿಶೈಲದಲ್ಲಿ ಗಣ್ಯರು ಕುವೆಂಪು ಸಮಾಧಿಗೆ ಪುಪ್ಪಾರ್ಚನೆ ಮಾಡಿದರು. ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಮಾತನಾಡಿದರು.

ವೇದಿಕೆಯಲ್ಲಿ ಸಚಿವ ಸಿ.ಟಿ. ರವಿ, ಶಾಸಕ ಆರಗ ಜ್ಞಾನೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನವಮಣಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಲ್ಪನಾ ಪದ್ಮನಾಭ್, ತಹಶೀಲ್ದಾರ್ ಭಾಗ್ಯ,ದೇವಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್, ಸದಸ್ಯ ಶಿಲ್ಪ, ಸವಿತಾ ಇದ್ದರು.

ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಪ್ರೊ.ಹಂ.ಪ. ನಾಗರಾಜಯ್ಯ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸ್ವಾಗತಿಸಿದರು. ಡಾ. ರಾಜೇಂದ್ರ ಬುರಡಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕುವೆಂಪು ಆದರ್ಶಗಳನ್ನು ಅಳವಡಿಸಿಕೊಳ್ಳಿ: ರವಿ

ಭಾಷೆ ಜೊತೆ ಸಂಸ್ಕೃತಿ ಇದೆ. ಕುವೆಂಪು ಅವರಿಗೆ ಕನ್ನಡ ಶಾಲೆ ಮುಚ್ಚುತ್ತವೆ ಎಂಬ ಯೋಚನೆ, ಕಲ್ಪನೆ ಬರಲು ಸಾಧ್ಯವಿರಲಿಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಕುವೆಂಪು ಇದ್ದಿದ್ದರೆ ಉತ್ತಮ ಸಲಹೆ ಸಿಗುತ್ತಿತ್ತು. ಕಲಬುರ್ಗಿ ಹತ್ಯೆ ದುರಂತ. ಯಾರು ಅವರನ್ನು ಅರ್ಥಮಾಡಿಕೊಂಡಿಲ್ಲವೋ ಅವರಿಂದ ಹತ್ಯೆ ನಡೆದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.