ADVERTISEMENT

ಸೋಂಪುರ: ಹಾಳಾದ ಸಂಪರ್ಕ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 20:11 IST
Last Updated 16 ಡಿಸೆಂಬರ್ 2018, 20:11 IST
ಇಮಚೇನಹಳ್ಳಿಯ ಕಚ್ಚಾ ರಸ್ತೆ
ಇಮಚೇನಹಳ್ಳಿಯ ಕಚ್ಚಾ ರಸ್ತೆ   

ದಾಬಸ್‌ಪೇಟೆ: ಸೋಂಪುರ ಹೋಬಳಿಯುದ್ದಕ್ಕೂ ಗ್ರಾಮೀಣ ಭಾಗದ ಬಹುತೇಕ ಸಂಪರ್ಕ ರಸ್ತೆಗಳು ಕಿತ್ತು ಹೋಗಿ ಗುಂಡಿಗಳು ಬಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

‘ಹೋಬಳಿಯ ಹಲವಾರು ಹಳ್ಳಿಗಳ ರಸ್ತೆಗಳು ಡಾಂಬರು ಕಂಡಿಲ್ಲ.ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಹಾಗೂ ಇನ್ನಿತರ ಯೋಜನೆಗಳ ಅಡಿ ಹೋಬಳಿಯ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿತ್ತು. ಕೆಲವು ವರ್ಷ ಕಾಲ ಜನರ ಸಂಚಾರಕ್ಕೆ ಅನುವಾಗಿದ್ದವು. ಆದರೆ ಅವುಗಳ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಗುಂಡಿಗಳು ಬಿದ್ದಿವೆ. ಮೃತ್ಯುಕೂಪಗಳಾಗಿ ಸಂಚಾರಕ್ಕೆ ಸಂಚಕಾರ ತಂದಿವೆ’ ಎಂಬುದು ಜನರ ದೂರು.

ದಾಬಸ್‌ಪೇಟೆ ಪಟ್ಟಣದಿಂದ ಸಂಪರ್ಕ ಪಡೆಯುವ ರಸ್ತೆಗಳಿಂದ ಹಿಡಿದು ನರಸೀಪುರ, ಶಿವಗಂಗೆ, ಮರಳಕುಂಟೆ, ನಿಡವಂದ, ಆಗಲಕುಪ್ಪೆ ಭಾಗಗಳೆಡೆಗೆ ಬರುವ ಹಳ್ಳಿಗಳ ರಸ್ತೆಗಳ ಸ್ಥಿತಿ ಶೋಚನೀಯ. ‘ಶಾಸಕರಾಗಿ ಶ್ರೀನಿವಾಸ ಮೂರ್ತಿ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ವಿವಿಧ ಕಾರ್ಯಕ್ರಮಗಳ ನಿಮಿತ್ತ ಇಲ್ಲೆಲ್ಲಾ ಸಂಚರಿಸುತ್ತಾರೆ. ಆದರೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ’ ಅನ್ನುವ ದೂರು ಇಲ್ಲಿನ ಸಾರ್ವಜನಿಕರದು.

ADVERTISEMENT

‘ಮಳೆಗಾಲ ಬಂದರೆ ತೊಂದರೆಗಳು ಹೆಚ್ಚಾಗುತ್ತವೆ. ಗುಂಡಿಗಳಲ್ಲಿ ನೀರು ನಿಂತಿರುವುದರಿಂದ ಬೈಕ್, ಸ್ಕೂಟರ್‌ಗಳಲ್ಲಿ ಬರುವವರು ಬಿದ್ದು ಗಾಯಗೊಳ್ಳುವುದು ಸಾಮಾನ್ಯ’ ಎಂದೂ ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸೋಂಪುರ ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡಯ್ಯ ಪ್ರತಿಕ್ರಿಯಿಸಿ, ‘ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿಯಲ್ಲಿ ಅನುದಾನದ ಕೊರತೆ ಇದೆ. ಕ್ಷೇತ್ರದ ಶಾಸಕರಿಗೆ ಅನುದಾನ ಹೆಚ್ಚಿಗೆ ಬರುವುದರಿಂದ ಗಮನ ಹರಿಸಬೇಕು’ ಎಂದರು.

‘ನಮ್ಮ ಗ್ರಾಮದ ರಸ್ತೆಗೆ ಸುಮಾರು ವರ್ಷಗಳ ಹಿಂದೆ ಡಾಂಬರು ಹಾಕಿದ್ದು ಬಿಟ್ಟರೆ ಮತ್ತೆ ಹಾಕಿಲ್ಲ. ಡಾಂಬರೆಲ್ಲಾ ಕಿತ್ತಿದ್ದು, ರಸ್ತೆ
ಯುದ್ದಕ್ಕೂ ಗುಂಡಿಗಳು ಬಿದ್ದಿವೆ. ಶಾಲಾ ಮಕ್ಕಳು, ಉದ್ಯೋಗಸ್ಥರು ಎದ್ದು ಬಿದ್ದು ಓಡಾಡಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ದುರಸ್ತಿಯ ಬಗ್ಗೆ ಗಮನ ಹರಿಸಬೇಕು’ ಎಂದುನರಸೀಪುರ ನಿವಾಸಿ ದೊರೆಸ್ವಾಮಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.