ಬೆಂಗಳೂರು: ಕ್ವಾಂಟಮ್ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಸಿದ್ಧಪಡಿಸಲು ಕಾರ್ಯಪಡೆ ರಚಿಸಲಿದೆ. ಜುಲೈ 31, ಆ. 1ರಂದು ಎರಡು ದಿನ ‘ಕ್ವಾಂಟಮ್ ಇಂಡಿಯಾ’ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಕ್ವಾಂಟಮ್ ಕ್ಷೇತ್ರದ ಕಂಪನಿಗಳ ಪ್ರಮುಖ ಪ್ರತಿನಿಧಿಗಳೊಂದಿಗೆ ನಡೆದ ಉನ್ನತಮಟ್ಟದ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕ್ವಾಂಟಮ್ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಸೌಲಭ್ಯ, ಹೊಸ ತಂತ್ರಜ್ಞಾನದ ಕೈಗಾರಿಕೆಗಳು, ಕೌಶಲ ಹೊಂದಿರುವ ಮಾನವ ಸಂಪನ್ಮೂಲ ರಾಜ್ಯದಲ್ಲಿವೆ. ಇಂತಹ ಸೌಲಭ್ಯ ಬೇರೆ ರಾಜ್ಯಗಳಲ್ಲಿ ಇಲ್ಲ. ಕೈಗಾರಿಕೆಗಳಿಗೆ ಅಗತ್ಯವಿರುವ ಜಮೀನು ಹಾಗೂ ಪೂರಕ ನೀತಿ ರೂಪಿಸಬೇಕಿದೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಚರ್ಚೆ ನಡೆಸಿ, ಕಾರ್ಯಪಡೆ ರಚನೆ ಅಂತಿಮಗೊಳಿಸಲಾಗುವುದು. ಅಗತ್ಯವಿರುವ ನೀತಿ ರೂಪಿಸಲಾಗುವುದು. 2035ರ ವೇಳೆಗೆ ‘ಕ್ವಾಂಟಮ್ ಅಡ್ವಾಂಟೇಜ್ ಡ್ರಿವನ್ ಎಕಾನಮಿ’ ಆಗುವುದು ನಮ್ಮ ಗುರಿ’ ಎಂದರು.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ವಿಷನ್ ಗ್ರೂಪ್‌ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.