ADVERTISEMENT

‘ರೋಸ್ಟರ್ ಬಿಂದು’ ಅನ್ಯಾಯ: ಸಿಎಂ ಸಿದ್ದರಾಮಯ್ಯಗೆ ಮನವಿ

ಒಕ್ಕಲಿಗರ ಸಂಘ ಮತ್ತು ವೀರಶೈವ ಮಹಾಸಭಾದಿಂದ ಪ್ರತ್ಯೇಕ ಮನವಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 13:49 IST
Last Updated 28 ಅಕ್ಟೋಬರ್ 2025, 13:49 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ವಿವಿಧ ಪ್ರವರ್ಗಗಳಿಗೆ ‘ರೋಸ್ಟರ್ ಬಿಂದು’ ನಿಗದಿಪಡಿಸಿ 2022ರ ಡಿ. 28ರಂದು ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದ್ದು, ಇದರಿಂದ ಪ್ರವರ್ಗ 3ಎ, ಪ್ರವರ್ಗ 3ಬಿ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದವರಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಒಕ್ಕಲಿಗರ ಸಂಘ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಸಲ್ಲಿಸಿವೆ.

ಈ ಆದೇಶ ಅನುಸರಿಸಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮತ್ತು ಬಡ್ತಿ ನೀಡುವುದರಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಪರಿಣತ ಅಧಿಕಾರಿಗಳನ್ನು ಒಳಗೊಂಡ ಉನ್ನತ ಸಮಿತಿ ರಚಿಸಬೇಕು ಎಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ.

ADVERTISEMENT

ಕೇಂದ್ರ ಸರ್ಕಾರ 1997 ಮತ್ತು 2019 ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯ ಆಧಾರದಲ್ಲಿ ವೈಜ್ಞಾನಿಕವಾಗಿ ಲೆಕ್ಕ ಹಾಕಿ ರೋಸ್ಟರ್‌ ಬಿಂದುಗಳನ್ನು ನಿಗದಿಪಡಿಸಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಆಧಾರ ಇಲ್ಲದೆ ರೋಸ್ಟರ್‌ ಬಿಂದುಗಳನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿದೆ. ಇದರಿಂದಾಗಿ ಪ್ರವರ್ಗ 3ಎ, ಪ್ರವರ್ಗ 3ಬಿ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದವರಿಗೆ ಹಲವು ವರ್ಷಗಳಿಂದ ಅನ್ಯಾಯವಾಗುತ್ತಲೇ ಬಂದಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಕಡಿಮೆ ಹುದ್ದೆಗಳು ಮಂಜೂರಾಗಿರುವ ಇಲಾಖೆಗಳಲ್ಲಿ ನೇಮಕಾತಿಗಳಲ್ಲಿಯೂ 100 ಬಿಂದುಗಳ ರೋಸ್ಟರ್‌ ಬಿಂದುಗಳನ್ನೇ ಅಳವಡಿಸುವುದರಿಂದ ಪ್ರವರ್ಗ 3ಎ ಮತ್ತು ಪ್ರವರ್ಗ 3ಬಿಗೆ ಸೇರಿದವರು ಶಾಶ್ವತವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರ ಅಳವಡಿಸುತ್ತಿರುವ ರೋಸ್ಟರ್‌ ಬಿಂದುಗಳ ಮಾದರಿಯನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದೂ ಕೋರಲಾಗಿದೆ.

ಒಕ್ಕಲಿಗರ ಸಂಘದ ವತಿಯಿಂದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪ ರೆಡ್ಡಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಪ್ರತ್ಯೇಕವಾಗಿ ಈ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.