ADVERTISEMENT

ಸಚಿವ ಪುಟ್ಟರಂಗ ಶೆಟ್ಟಿ ಟೈಪಿಸ್ಟ್‌ ಬಳಿ ₹25.76 ಲಕ್ಷ ಪತ್ತೆ !

ವಿಧಾನಸೌಧದ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದ ಮೋಹನ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 19:44 IST
Last Updated 4 ಜನವರಿ 2019, 19:44 IST
 ಮೋಹನ್
ಮೋಹನ್   

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಮೋಹನ್,ದಾಖಲೆ ಇಲ್ಲದ ₹25.76 ಲಕ್ಷ ಸಾಗಿಸುತ್ತಿದ್ದ ವೇಳೆಯಲ್ಲೇ ವಿಧಾನಸೌಧದ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ.

‘ವಿಧಾನಸೌಧದಲ್ಲಿರುವ ಸಚಿವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೋಹನ್, ಹಣವಿದ್ದ ಬ್ಯಾಗ್‌ ಸಮೇತ ಸಂಜೆ 6.30ರ ಸುಮಾರಿಗೆ ಹೊರಗೆ ಬರುತ್ತಿದ್ದರು. ಭದ್ರತಾ ಸಿಬ್ಬಂದಿ, ಅವರನ್ನು ತಪಾಸಣೆಗೆ ಒಳಪಡಿಸಿದಾಗ ಹಣವಿರುವುದು ಗೊತ್ತಾಯಿತು’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

ಗುತ್ತಿಗೆದಾರ ಕೊಟ್ಟಿದ್ದ ಹಣ? ‘ಮಲ್ಲೇಶ್ವರ ನಿವಾಸಿಯಾದ ಮೋಹನ್, ಇತ್ತೀಚೆಗಷ್ಟೇ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿ ಸೇರಿದ್ದರು. ಕಚೇರಿಗೆ ಬರುತ್ತಿದ್ದ ಹಲವು ಗುತ್ತಿಗೆದಾರರ ಪರಿಚಯ ಅವರಿಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಮಧ್ಯಾಹ್ನವಷ್ಟೇ ವಿಧಾನಸೌಧದೊಳಗೆ ಬಂದಿದ್ದ ಎನ್ನಲಾದ ಗುತ್ತಿಗೆದಾರನೊಬ್ಬ, ಹಣವಿದ್ದ ಬ್ಯಾಗ್‌ನ್ನು ಮೋಹನ್‌ಗೆ ಕೊಟ್ಟು ವಾಪಸ್ ಹೋಗಿದ್ದ. ಬ್ಯಾಗ್‌ನಲ್ಲಿ ಹಣವಿರುವುದನ್ನು ಗಮನಿಸಿದ್ದ ವ್ಯಕ್ತಿಯೊಬ್ಬರು, ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅದೇ ಕಾರಣಕ್ಕೆ ಸಿಬ್ಬಂದಿ, ಮೋಹನ್‌ ಅವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿ ಹಣವನ್ನು ಪತ್ತೆ ಹಚ್ಚಿದರು. ಎಲ್ಲವೂ ₹2 ಸಾವಿರ ಮುಖಬೆಲೆಯ ನೋಟುಗಳು’ ಎಂದರು.

‘ಪ್ರಕರಣ ಸಂಬಂಧ ಸಿಆರ್‌ಪಿಸಿ 41/ಡಿ (ದಾಖಲೆ ಇಲ್ಲದ ಹಣ ಹೊಂದಿರುವುದು) ಹಾಗೂ ಸಿಆರ್‌ಪಿಸಿ 102 (ದಾಖಲೆಗಳಿಲ್ಲದ ಹಣವನ್ನು ಪೊಲೀಸರು ಜಪ್ತಿ ಮಾಡುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಧಾನಸೌಧ ಬಳಿಯ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದರು.

‘ಹಣ ಕೊಟ್ಟ ಗುತ್ತಿಗೆದಾರ ಯಾರು ಎಂಬುದನ್ನು ಮೋಹನ್ ಬಾಯ್ಬಿಡುತ್ತಿಲ್ಲ. ರಾತ್ರಿಯೆಲ್ಲ ಅವರ ವಿಚಾರಣೆ ಮುಂದುವರಿಯಲಿದೆ’ ಎಂದರು.

***

ಮೋಹನ್‌ನನ್ನು ಹಲವು ದಿನಗಳ ಹಿಂದೆಯೇ ಕಚೇರಿಯಿಂದ ಹೊರಗೆ ಹಾಕಿದ್ದೇನೆ. ಆತನಿಗೂ ನನಗೂ ಯಾವುದೇ ಸಂಬಂಧವಿಲ್ಲ. ಆ ವಿಷಯ ನನಗೆ ಗೊತ್ತಿಲ್ಲ

-ಸಿ. ಪುಟ್ಟರಂಗ ಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.