ADVERTISEMENT

₹500 ಕೋಟಿ ಬಿಡುಗಡೆ: ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಕೊಡಿ -ಬೊಮ್ಮಾಯಿ

ಮೂಲಸೌಕರ್ಯಗಳ ತುರ್ತು ಮರುಸ್ಥಾಪನೆಗೆ ₹500 ಕೋಟಿ ಬಿಡುಗಡೆ ಆದೇಶ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 19:31 IST
Last Updated 15 ಜುಲೈ 2022, 19:31 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಅತಿವೃಷ್ಟಿಯಿಂದ ಆದ ಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ, ವ್ಯವಸ್ಥಿತ ಪರಿಹಾರವನ್ನು ತಕ್ಷಣವೇ ಒದಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಳೆ ಮತ್ತು ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಶುಕ್ರವಾರ ವಿಡಿಯೊ ಸಂವಾದ ನಡೆಸಿದ ಅವರು, ಹಾನಿಗೊಳಗಾದ ಮೂಲಭೂತ ಸೌಕರ್ಯಗಳ ತುರ್ತು ಮರುಸ್ಥಾಪನೆಗಾಗಿ ₹500 ಕೋಟಿ ಹಣವನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸಿರುವುದಾಗಿಯೂ ಹೇಳಿದರು.

ತ್ವರಿತಗತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಯಥಾಸ್ಥಿತಿಗೆ ತರಬೇಕಾಗಿದೆ. ಇದಕ್ಕಾಗಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ. ಅದಕ್ಕಾಗಿ ಹಣ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ ಎಂದರು.

ADVERTISEMENT

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹೊರಬಿಡಲಾಗುತ್ತಿರುವ ನೀರಿನ ಪ್ರಮಾಣದ ಬಗ್ಗೆ ನಿಗಾವಹಿಸಲು ಹಾಗೂ ಆ ರಾಜ್ಯದ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರುವಂತೆಯೂ ನಿರ್ದೇಶನ ನೀಡಿದರು.

ಜಲಾಶಯಗಳಿಂದ ನೀರು ಹೊರಬಿಡುವುದಕ್ಕೆ ಮುನ್ನ ಕೆಳಗಿನ ಪ್ರದೇಶದ ಗ್ರಾಮಗಳಿಗೆ ಎಚ್ಚರಿಕೆ ನೀಡಿ ಜೀವಹಾನಿ ಮತ್ತು ಮನೆಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಮುನ್ನೆಚ್ಚರಿಗೆ ವಹಿಸಬೇಕು ಮತ್ತು ಜನರನ್ನು ಸ್ಥಳಾಂತರ ಮಾಡಬೇಕು.ಬೆಳೆ ಹಾನಿ, ರಸ್ತೆ, ಮನೆ ಮತ್ತು ಸರ್ಕಾರಿ ಕಟ್ಟಡಗಳ ಹಾನಿ ಬಗ್ಗೆ ಸರಿಯಾಗಿ ಸಮೀಕ್ಷೆ ನಡೆಸಬೇಕು ಎಂದೂ ಬೊಮ್ಮಾಯಿ ಹೇಳಿದರು.

‘ಕಳೆದ ಕೆಲವು ದಿನಗಳಿಂದ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಮೂಲಸೌಕರ್ಯಗಳಿಗೆ ಹಾನಿಯಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆ, ಸೇತುವೆ, ಶಾಲೆ, ಅಂಗನವಾಡಿ ಕೇಂದ್ರ, ವಿದ್ಯುತ್‌ ಕಂಬ, ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಗಳಿಗೆ ಹಾನಿಯಾಗಿದೆ. ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಕಣ್ಣಾರೆ ಕಂಡಿದ್ದೇನೆ’ ಎಂದು ಹೇಳಿದರು.

ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಪ್ರಕಾರ ಹಾನಿಗೊಳಗಾಗಿರುವ ಮನೆಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಒದಗಿಸಬೇಕು ಎಂದರು.

ಜಿಲ್ಲಾಧಿಕಾರಿ ಸೂಚನೆ...

lಜಲಾಶಯಗಳಿಂದ ನೀರು ಹೊರಬಿಡುವುದಕ್ಕೆ ಮುನ್ನ ಗ್ರಾಮಗಳಿಗೆ ಎಚ್ಚರಿಕೆ ನೀಡಿ ಜೀವಹಾನಿ ಮತ್ತು ಮನೆಗಳಿಗೆ ಹಾನಿಯಾಗುವುದನ್ನು ತಪ್ಪಿಸಿ, ಜನರನ್ನು ಸ್ಥಳಾಂತರ ಮಾಡಬೇಕು.

lಜಿಲ್ಲೆಗಳಲ್ಲಿ ಮುಂದಿನ 5–6 ದಿನಗಳಲ್ಲಿ ಮಳೆ ಮತ್ತು ಪ್ರವಾಹದ ಮುನ್ಸೂಚನೆಯನ್ನು ಗಮನಿಸಬೇಕು. ಮುನ್ನೆಚ್ಚರಿಕಾ ಕ್ರಮಗಳ ಜತೆಗೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೂ ಸನ್ನದ್ಧರಾಗಬೇಕು.

lಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳಿಗೆ ಅಗತ್ಯವಿರುವ ಲಾಜಿಸ್ಟಿಕ್ಸ್‌ ನೆರವನ್ನು ಒದಗಿಸಿ ತೊಂದರೆಗಿಡಾದ ಪ್ರದೇಶಗಳಿಗೆ ತಕ್ಷಣವೇ ತಲುಪಲು ಕ್ರಮವಹಿಸಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ಮೇಲ್ವಿಚಾರಣೆ ಕೈಗೊಳ್ಳಬೇಕು.

lವಿದ್ಯುತ್‌ ಸಂಪರ್ಕ ಪುನರ್‌ ಸ್ಥಾಪಿಸಲು ಅತಿ ಹೆಚ್ಚಿನ ಆದ್ಯತೆ ನೀಡಿ ಬಾಧಿತ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಒದಗಿಸಲು ಎಸ್ಕಾಂಗಳು ಶ್ರಮವಹಿಸಬೇಕು.

lರಸ್ತೆ, ಸೇತುವೆ, ಕಲ್ವರ್ಟ್‌ ಹಾಗೂ ಟ್ಯಾಂಕ್‌ ಬಂಡ್‌ಗಳನ್ನು ತಾತ್ಕಾಲಿಕವಾಗಿ ತಕ್ಷಣವೇ ಸರಿಪಡಿಸಿ, ಶಾಶ್ವತ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು.

lಬೆಳೆ ಹಾನಿ ಕುರಿತು ತನಿಖೆ ಕೈಗೊಂಡು ಒಂದು ತಿಂಗಳೊಳಗೆ ‘ಇನ್‌ಪುಟ್‌’ ಸಬ್ಸಿಡಿ ವಿತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.