ADVERTISEMENT

ಶಿವವಿಶ್ವನಾಥನ್‌ ಮಾತಿಗೆ ಸಂತೋಷ್‌ ಆಕ್ಷೇಪ

‘ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವಿರೋಧಿ ಕೃತ್ಯ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 3:14 IST
Last Updated 21 ಜನವರಿ 2019, 3:14 IST
ಬಿ.ಎಲ್. ಸಂತೋಷ
ಬಿ.ಎಲ್. ಸಂತೋಷ   

ಧಾರವಾಡ: ‘ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಉದಾರತೆ ಹೆಸರಿನಲ್ಲಿ ಸರ್ಕಾರಿ ಹಣದಲ್ಲಿ ಜೀವನ ನಡೆಸುವ ವಿಶಿಷ್ಟ ವರ್ಗವು ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದೆ’ ಎಂದು ಬಿಜೆಪಿರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಆಪಾದಿಸಿದರು.

ಭಾನುವಾರ ಇಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್‌ ಜಿಲ್ಲಾ ಸಾಂಘಿಕ್‌ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸೈನಿಕರಿಗೆ, ಸ್ವಯಂಸೇವಕರಿಗೆ ಹಾಸ್ಯ ಮಾಡಲಿ ಒಪ್ಪುತ್ತೇವೆ. ಏಕೆಂದರೆ ನಗುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಅವರೊಂದಿಗೆ ನಾವೂ ನಗುತ್ತೇವೆ. ಆದರೆ, ಅವಮಾನ ಆಗುವಂಥ ಸಂಗತಿಗಳನ್ನು ಸಹಿಸುವುದಿಲ್ಲ. ಧಾರವಾಡ ಸಾಹಿತ್ಯ ಸಂಭ್ರಮದ ಆಯೋಜಕರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ನೇರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.

ADVERTISEMENT

‘ದೇಶದ ಗೌರವ, ಸಮಾಜದ ವ್ಯವಸ್ಥೆ, ಹಿಂದೂ ಎಂಬ ಸ್ವಾಭಿಮಾನ ಕಾಪಾಡಲು ಸಂಘದ ಸ್ವಯಂ ಸೇವಕರಿದ್ದಾರೆ. ಸವಾಲುಗಳಿಗೆ ಉತ್ತರ ಕೊಡುವ ಸಾಮರ್ಥ್ಯ ಅವರಲ್ಲಿದೆ. ಸೈನಿಕರನ್ನು ರೇಪಿಸ್ಟರು ಎಂದು ಕರೆಯಲು ಸ್ವಾತಂತ್ರ್ಯ ಬೇಕಾದರೆ, ಸಾಹಿತ್ಯ ಸಂಭ್ರವವನ್ನು ಅಂಡಮಾನ್-ನಿಕೋಬಾರ್‌ನಲ್ಲಿ ಮಾಡಲಿ’ ಎಂದು ಹೇಳಿದರು.

‘ಮೂಲಭೂತ ಸ್ವಾತಂತ್ರ್ಯಕ್ಕೆ ಸಾಮಾಜಿಕ ಹಿತದ ಚೌಕಟ್ಟಿದೆ. ಮೂಲಭೂತ ಸ್ವಾತಂತ್ರ್ಯ ಎಂದರೆ ಮನಸ್ಸಿಗೆ ಬಂದಂತೆ ಬೇಕಾದ್ದು ಮಾಡಬಹದು; ಮಾತನಾಡಬಹುದೇ?, ವ್ಯಕ್ತಿ-ಸಮಾಜದ ಭಾವನೆ ಗಾಸಿ ಮಾಡಬಹುದೇ?’ ಎಂದು ಕೇಳಿದರು.

‘ವಿದೇಶಿ ಶಿಕ್ಷಣ ಪಡೆದು, ವಿದೇಶಿ ಮಾನಸಿಕತೆ ಅಳವಡಿಸಿಕೊಳ್ಳುವ, ವಿದೇಶ ಜೀವನವೇ ಶ್ರೇಷ್ಠ ಎನ್ನುವ ಅಧಿಕಾರಿಗಳು, ಜನರು ಎಲ್ಲ ಕಡೆಗಳಲ್ಲಿ ಇದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.