ADVERTISEMENT

ಅರಮನೆ ಮಂಡಳಿಗೆ ₹75 ಸಾವಿರ ದಂಡ

ಸರ್ಕಾರೇತರ ಸಂಸ್ಥೆ ಎಂದು ತಪ್ಪು ಮಾಹಿತಿ ನೀಡಿದ್ದ ಉಪ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 15:46 IST
Last Updated 9 ಏಪ್ರಿಲ್ 2025, 15:46 IST
ಮಾಹಿತಿ ಆಯೋಗ ಕೇಂದ್ರ
ಮಾಹಿತಿ ಆಯೋಗ ಕೇಂದ್ರ   

ಬೆಂಗಳೂರು: ಮೈಸೂರು ಅರಮನೆ ಮಂಡಳಿಯನ್ನು ಸರ್ಕಾರೇತರ ಸಂಸ್ಥೆ ಎಂದು ತಪ್ಪು ಮಾಹಿತಿ ನೀಡಿದ್ದ ಹಾಗೂ ನೈಜ ಮಾಹಿತಿ ಒದಗಿಸಲು ಒಂದು ವರ್ಷಕ್ಕೂ ಹೆಚ್ಚು ಅಲೆದಾಡಿಸಿದ್ದ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ಅವರಿಗೆ ಕರ್ನಾಟಕ ಮಾಹಿತಿ ಆಯೋಗ ₹25 ಸಾವಿರ ದಂಡ, ₹50 ಸಾವಿರ ಪರಿಹಾರ ನೀಡುವಂತೆ ವಿಧಿಸಿದೆ.

ಮೈಸೂರಿನ ರಾಮಕೃಷ್ಣ ನಗರದ ಕೆ. ರಾಮೇಶ್ವರಪ್ಪ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಆಯೋಗ, ಸರ್ಕಾರದ ವರ್ಗಾವಣಾ ನಿಯಮಗಳನ್ನೂ ಮೀರಿ 12 ವರ್ಷಗಳಿಂದ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿರುವ ಸುಬ್ರಹ್ಮಣ್ಯ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು. ಪಾರದರ್ಶಕ ಆಡಳಿತಕ್ಕಾಗಿ ಆ ಸ್ಥಾನಕ್ಕೆ ಕೆಎಎಸ್‌ ಹಿರಿಯ ಶ್ರೇಣಿ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. 

ಮೈಸೂರು ಅರಮನೆ (ಅರ್ಜನೆ ಮತ್ತು ವರ್ಗಾವಣೆ) ಕಾಯ್ದೆ 1998ರ ಅನ್ವಯ ಮೈಸೂರು ಅರಮನೆಯನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆದುಕೊಂಡಿದೆ. ಆಡಳಿತ ನಿರ್ವಹಣೆಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ‘ಮೈಸೂರು ಅರಮನೆ ಮಂಡಳಿ’ ರಚಿಸಲಾಗಿದೆ. ಮಂಡಳಿಗೆ ಮೈಸೂರು ಜಿಲ್ಲಾಧಿಕಾರಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇಮಿಸಿದ ಉಪ ನಿರ್ದೇಶಕರು ದೈನಂದಿನ ಕೆಲಸ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. ಇದು ಸಾರ್ವಜನಿಕ ಪ್ರಾಧಿಕಾರ ಎಂದು ಆಯೋಗ ಖಚಿತಪಡಿಸಿದೆ. 

ADVERTISEMENT

ಅರಮನೆ ಮಂಡಳಿಯ ಎಲ್ಲ 113 ಸಿಬ್ಬಂದಿ ರಾಜ್ಯ ಸರ್ಕಾರದ ನೌಕರರಾಗಿದ್ದಾರೆ. ಮಂಡಳಿ ಶಾಸನಬದ್ಧವಾಗಿ ರಚಿತವಾದ ಸರ್ಕಾರದ ಅಂಗಸಂಸ್ಥೆ. ರಕ್ಷಣೆ ಒದಗಿಸುವ ನಗರ ಸಶಸ್ತ್ರ ಮೀಸಲು ಪಡೆಗೂ ಸರ್ಕಾರವೇ ವೇತನ ಪಾವತಿಸುತ್ತದೆ. ಮಂಡಳಿಗೆ ಅಗತ್ಯವಾದ ಅನುದಾನವನ್ನೂ ಸರ್ಕಾರ ನೀಡುತ್ತಿದೆ. ಈ ಐತಿಹಾಸಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಸಂಗ್ರಹ ಮಾಡಿದ ಶುಲ್ಕವನ್ನು ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ಉಪ ನಿರ್ದೇಶಕರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ‘ಮಂಡಳಿ ಸರ್ಕಾರೇತರ ಸಂಸ್ಥೆಯಾಗಿರುವ ಕಾರಣ ಮಾಹಿತಿ ಒದಗಿಸಲು ಆಗದು’ ಎಂದು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದು ಮಾಹಿತಿ ಹಕ್ಕು ಕಾಯ್ದೆಗೆ ವಿರುದ್ಧವಾದ ನಡೆ ಎಂದು ಆಯೋಗ ವಿವರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.