ADVERTISEMENT

‘ಸುಪ್ರೀಂ’ ಅಂಗಳದಲ್ಲಿ ಐಎಂವಿಗಳ ‘ಅರ್ಹತೆ’!

‘ಪ್ರತಿಷ್ಠಿತ ವರ್ಕ್‌ಶಾಪ್‌’ ಗೊಂದಲ ಕೈಬಿಟ್ಟ ಕೇಂದ್ರ ಸರ್ಕಾರ l ಆಯ್ಕೆಯಾದವರು ಅತಂತ್ರ

ರಾಜೇಶ್ ರೈ ಚಟ್ಲ
Published 16 ಸೆಪ್ಟೆಂಬರ್ 2019, 19:30 IST
Last Updated 16 ಸೆಪ್ಟೆಂಬರ್ 2019, 19:30 IST
   

ಬೆಂಗಳೂರು: ಸಾರಿಗೆ ಇಲಾಖೆಯ ಮೋಟಾರು ವೆಹಿಕಲ್ ಇನ್‌ಸ್ಪೆಕ್ಟರ್‌ (ಐಎಂವಿ) ಹುದ್ದೆಯ ಅರ್ಹತೆ ಗೊಂದಲ ಮುಂದುವರಿದಿದ್ದು, ಆಯ್ಕೆಯಾಗಿರುವ ಅಭ್ಯರ್ಥಿಗಳು ಅತಂತ್ರರಾಗಿದ್ದಾರೆ.

ಈ ಹುದ್ದೆಗೆ ‘ಪ್ರತಿಷ್ಠಿತ ವರ್ಕ್‌ಶಾಪ್‌’ನಿಂದ ಪೆಟ್ರೋಲ್‌ನಲ್ಲಿ ಓಡುವ ಬಸ್‌ ಮತ್ತು ಲಾರಿ (ಹೆವಿ ಗೂಡ್ಸ್‌ ವೆಹಿಕಲ್‌– ಎಚ್‌ಜಿವಿ) ದುರಸ್ತಿಯ ಒಂದು ವರ್ಷ ಅನುಭವ ಪ್ರಮಾಣ ಪತ್ರ ಹೊಂದಿರಬೇಕು ಎಂಬ ‘ಅರ್ಹತೆ’ಯನ್ನು ಮೋಟಾರು ವಾಹನ ಕಾಯ್ದೆಯಿಂದ 2019ರ ಮಾರ್ಚ್‌ 8ರಂದುಕೇಂದ್ರ ಸರ್ಕಾರ ತೆಗೆದುಹಾಕಿದೆ. ಪೆಟ್ರೋಲ್‌ನಲ್ಲಿ ಓಡುವ ಬಸ್‌, ಲಾರಿಗಳೇ ಇಲ್ಲದಿರುವಾಗ ದುರಸ್ತಿ ಮಾಡುವ ವರ್ಕ್‌ಶಾಪ್‌ಗಳು ಇರಲು ಹೇಗೆ ಸಾಧ್ಯ ಎಂದು ರಾಜ್ಯ ಸರ್ಕಾರ ಗಮನ ಸೆಳೆದಿದ್ದರಿಂದ ಕೇಂದ್ರ ಈ ಕ್ರಮ ತೆಗೆದುಕೊಂಡಿತ್ತು.

ಆದರೆ, ರಾಜ್ಯ ಸರ್ಕಾರ, ಆ. 9ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ, ‘ಪ್ರತಿಷ್ಠಿತ ವರ್ಕ್‌ಶಾಪ್‌ಗಳು ಯಾವುವು ಎಂಬುದನ್ನು ನಿರ್ಣಯಿಸುವ ವಿಚಾರದಲ್ಲಿ ಗೊಂದಲವಿದೆ. ಆದರೆ, ಈ ತಿದ್ದುಪಡಿ ಮುಂದಿನ ದಿನಗಳಲ್ಲಿ ಅನ್ವಯವಾಗಲಿದೆ. ಹೀಗಾಗಿ, ಬಾಕಿ ಇರುವ ಪ್ರಕರಣಗಳ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಪ್ರತಿಪಾದಿಸಿದೆ. ಇದು ನೇಮಕಾತಿ ಪ್ರಕ್ರಿಯೆಯನ್ನೇ ಅಯೋಮಯವಾಗಿಸಿದೆ.

ADVERTISEMENT

2016ರಲ್ಲಿ ಹೊರಡಿಸಿದ ಅಧಿಸೂಚನೆಯ ಪ್ರಕಾರ ಐಎಂವಿ‌ ಹುದ್ದೆಗೆ ಆಯ್ಕೆಯಾದ 129 ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಕೆಪಿಎಸ್‌ಸಿ ಇತ್ತೀಚೆಗೆ ಪ್ರಕಟಿಸಿದೆ. ಆಯ್ಕೆಯಾದವರು ‘ಪ್ರತಿಷ್ಠಿತ ವರ್ಕ್‌ಶಾಪ್‌’ಗಳ ಪ್ರಮಾಣಪತ್ರ ಸಲ್ಲಿಸದೇ ಇರುವುದರಿಂದ ಈ ಪಟ್ಟಿಗೆ ತಡೆಯಾಜ್ಞೆ ನೀಡಬೇಕು’ ಎಂದು 2008ರಲ್ಲಿ ಆಯ್ಕೆಯಾಗಿ 11 ವರ್ಷಗಳಿಂದ ಡೋಲಾಯಮಾನ ಸ್ಥಿತಿಯಲ್ಲಿರುವ ಐಎಂವಿ‌ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈ ಪ್ರಮಾಣಪತ್ರ ಸಲ್ಲಿಸಿದೆ.

‘ಅರ್ಹತೆ’ಯ ಗೊಂದಲ: 2008ರಲ್ಲಿ ಆಯ್ಕೆಯಾಗಿರುವ 102 ಐಎಂವಿಗಳು ಈ ‘ಅರ್ಹತೆ’ ಇಲ್ಲ ಎಂಬ ಕಾರಣಕ್ಕೆ ಕೆಎಟಿ ಮತ್ತು ಹೈಕೋರ್ಟ್‌ ತೀರ್ಪಿನಿಂದ ಹುದ್ದೆ ಕಳೆದುಕೊಂಡರೂ, ಸುಪ್ರೀಂ ಕೋರ್ಟ್‌ಮೆಟ್ಟಿಲೇರಿದ್ದರಿಂದ ಸಿಕ್ಕಿದ ‘ಅಂತಿಮ ತೀರ್ಪಿಗೆ ಒಳಪಟ್ಟು’ ಎಂಬ ಅಭಯದಿಂದಾಗಿ ಮುಂದುವರಿಯುವಂತಾಗಿದೆ.

2016ರಲ್ಲಿ ಆಯ್ಕೆಯಾದವರಿಗೂಇದೇ ‘ಕಂಟಕ’ ಎದುರಾಗಿದ್ದು, ಮೂರೂವರೆ ವರ್ಷಗಳ ಬಳಿಕ ಪ್ರಕಟಗೊಂಡ ಪಟ್ಟಿಗೆ ಗ್ರಹಣ ಬಡಿದಿದೆ. 575ಕ್ಕೂ ಹೆಚ್ಚುಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಕೆಪಿಎಸ್‌ಸಿ ಕೂಡ ಅಡಕತ್ತರಿಯಲ್ಲಿ ಸಿಲುಕಿದೆ.

2005ರ ನ. 24ರಂದು ಅಧಿಸೂಚನೆ ಮೂಲಕ ತಿದ್ದುಪಡಿ ಮಾಡಿದ ‘ಕರ್ನಾಟಕ ಸಾಮಾನ್ಯ ಸೇವೆ (ಮೋಟಾರು ವಾಹನ ಶಾಖೆ) ನೇಮಕಾತಿ ನಿಯಮಗಳು 1976’ ಅಡಿ 2008ರಲ್ಲಿ ನೇಮಕಾತಿ ನಡೆದಿತ್ತು. ಆ ನಿಯಮಗಳ ಪ್ರಕಾರ, ‘ಪ್ರತಿಷ್ಠಿತ ವರ್ಕ್‌ ಶಾಪ್‌’ನಲ್ಲಿ ದುರಸ್ತಿ ಅನುಭವ ಅಗತ್ಯ ಇರಲಿಲ್ಲ. ಆದರೆ, ಆಗ ಆಯ್ಕೆಯಾದವರು, ಸುಪ್ರೀಂ ಕೋರ್ಟ್‌ ಆದೇಶದಿಂದ ಈಗಲೂ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಈ ವ್ಯಾಜ್ಯ ವಿಚಾರಣೆಯ ಹಂತದಲ್ಲಿರುವುದರಿಂದ ಹುದ್ದೆಗೆ ಸಂಚಕಾರ ಬರಬಹುದು ಎಂಬ ಭೀತಿ ಅವರದ್ದು.

‘ಪೆಟ್ರೋಲ್‌ನಿಂದ ಓಡುವ ಬಸ್‌, ಲಾರಿಗಳ ದುರಸ್ತಿ ವರ್ಕ್‌ಶಾಪ್‌ಗಳಿಲ್ಲವೆಂದು ಸರ್ಕಾರವೇ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವಾಗ 129 ಅಭ್ಯರ್ಥಿಗಳ ನೇಮಕಾತಿ ಊರ್ಜಿತವಾಗಲು ಹೇಗೆ ಸಾಧ್ಯ. ಅವರು ಸಲ್ಲಿಸಿದ ಪ್ರಮಾಣ ಪತ್ರಗಳನ್ನು ಅಧಿಕಾರಿಗಳು ದೃಢೀಕರಿಸಿದ್ದಾದರೂ ಹೇಗೆ? ಅವರ ನೇಮಕಾತಿಗೆ ತಡೆ ನೀಡಬೇಕು’ ಎಂದು ‘ಅತಂತ್ರ’ ಸ್ಥಿತಿಯಲ್ಲಿರುವ ಐಎಂವಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

‘ಈ ಅರ್ಹತೆ ತೆಗೆಯಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಹಿಂದೆಯೇ ಪ್ರಮಾಣ ಪತ್ರ ಸಲ್ಲಿಸಿತ್ತು. 2016ರ ಪ್ರಕರಣದಲ್ಲಿ ವರ್ಕ್‌ಶಾಪ್‌ಗಳ ಬಗ್ಗೆ ಗೊಂದಲವಿದೆ ಎಂದು ಮತ್ತೆ ಪ್ರಮಾಣ ಪತ್ರ ಸಲ್ಲಿಸಿದೆ. ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ’ ಎನ್ನುವುದು 2008ರಲ್ಲಿ ಆಯ್ಕೆಯಾದವರ ಆರೋಪ.

430 ‘ಐಎಂವಿ’ಗಳಲ್ಲಿ 298 ಖಾಲಿ!

430 ಐಎಂವಿ ಹುದ್ದೆಗಳ ಪೈಕಿ 298 ಖಾಲಿ ಇವೆ. ಕೆಲಸ ಮಾಡುತ್ತಿರುವವರಲ್ಲಿ ಸುಪ್ರೀಂ ಕೋರ್ಟ್‌ನ ‘ಆಸರೆ’ ಪಡೆದ ಐಎಂವಿಗಳೂ ಇದ್ದಾರೆ.

‘ಕೆಪಿಎಸ್‌ಸಿ ನಿಗದಿಪಡಿಸಿದ ಅರ್ಹತೆಯನ್ನು ನಾವು ಹೊಂದಿದ್ದೇವೆ. ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಭ್ರಷ್ಟಾಚಾರ ನಿಗ್ರಹ ದಳ ಕೂಡ ಹೇಳಿದ್ದು, ತಕ್ಷಣವೇ ನಮಗೆ ನೇಮಕಾತಿ ಆದೇಶ ನೀಡಬೇಕು’ ಎನ್ನುವುದು 2016ರ ಆಯ್ಕೆಯ ಪಟ್ಟಿಯಲ್ಲಿರುವವರ ಅಹವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.