ADVERTISEMENT

‘12ರಿಂದ ಕಡತ ವಿಲೇವಾರಿ ಸಪ್ತಾಹ’

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 20:01 IST
Last Updated 1 ನವೆಂಬರ್ 2018, 20:01 IST
ಆರ್.ವಿ.ದೇಶಪಾಂಡೆ
ಆರ್.ವಿ.ದೇಶಪಾಂಡೆ   

ಕಾರವಾರ: ಕಂದಾಯ ಇಲಾಖೆಯಲ್ಲಿ ಬಹಳ ವರ್ಷಗಳಿಂದ ಬಾಕಿಯಿರುವ ಕಡತಗಳ ವಿಲೇವಾರಿಗೆ ಇದೇ 12ರಿಂದ 18ರವರೆಗೆ ‘ಕಡತ ವಿಲೇವಾರಿ ಸಪ್ತಾಹ’ ಆಚರಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಹಳೆಯ ಕಡತಗಳ ವಿಲೇವಾರಿಗೆ ಈ ಸಪ್ತಾಹದಲ್ಲಿ ಆದ್ಯತೆ ನೀಡಲಾಗುತ್ತದೆ. ಈ ಸಂಬಂಧ ಜಿಲ್ಲಾಧಿಕಾರಿಗಳು, ತಹಶೀಲ್ದಾರರನ್ನೂ ಒಳಗೊಂಡಂತೆ ಎಲ್ಲ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಹಂತಹಂತವಾಗಿ ಜಾರಿ: ‘ರಾಜ್ಯದ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದು ದೊಡ್ಡ ಪ್ರಕ್ರಿಯೆ ಆಗಿರುವ ಕಾರಣ ಹಂತಹಂತವಾಗಿ ಪೂರ್ಣಗೊಳಿಸಲಾಗುವುದು’ ಎಂದರು.

ರಾಜ್ಯದಲ್ಲಿ 2,742 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದ್ದು, ವಿವಿಧ ಜಿಲ್ಲಾಧಿಕಾರಿಗಳಿಂದ 2,353 ಪ್ರಸ್ತಾವಗಳನ್ನು ಸ್ವೀಕರಿಸಲಾಗಿದೆ. ಅವುಗಳ ಪೈಕಿ 1,410 ಗ್ರಾಮಗಳಿಗೆ ಪ್ರಾಥಮಿಕ, 700 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಪ್ರಸ್ತಾವ ಸಲ್ಲಿಸಲಾದ ಜನವಸತಿ ಪ್ರದೇಶಗಳ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಕಂದಾಯ ಅದಾಲತ್‌ ಆಯೋಜಿಸಲು ಆರು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ತಹಶೀಲ್ದಾರರು ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.