ಬೆಂಗಳೂರು: ಕೋಣನಕುಂಟೆಯ ಆರ್‌ವಿ ಪಿಯು ಕಾಲೇಜು, ಪಾಠ ಮಾಡುವಾಗ ಕನ್ನಡದಲ್ಲಿ ಉತ್ತರಿಸಿದ್ದಕ್ಕೆ ಉಪನ್ಯಾಸಕರೊಬ್ಬರ ರಾಜೀನಾಮೆ ಪಡೆದಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ರಾಜೀನಾಮೆಯನ್ನು ರದ್ದುಪಡಿಸಿದೆ.
ಆರ್‌ವಿ ಪಿಯು ಕಾಲೇಜಿನ ಉಪನ್ಯಾಸಕ ರೂಪೇಶ್ ಪುತ್ತೂರು ಅವರು ಶನಿವಾರ ಬೆಳಿಗ್ಗೆ ಫೇಸ್‌ಬುಕ್‌ನಲ್ಲಿ ಒಂದು ವಿಡಿಯೊ ಪೋಸ್ಟ್ ಮಾಡಿದ್ದರು.
‘ನಾನು ಆರ್‌ವಿ ಪಿಯು ಕಾಲೇಜಿನಲ್ಲಿ ರಾಸಾಯನಿಕ ವಿಜ್ಞಾನ ಉಪನ್ಯಾಸಕನಾಗಿದ್ದೆ. ಪಾಠ ಮಾಡುವಾಗ ವಿದ್ಯಾರ್ಥಿನಿಯೊಬ್ಬರು ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ, ಕನ್ನಡದಲ್ಲೇ ಉತ್ತರಿಸಿದ್ದೆ. ಆಗ ಮತ್ತೊಬ್ಬ ವಿದ್ಯಾರ್ಥಿ ಕನ್ನಡದಲ್ಲಿ ಹೇಳಿದರೆ ನನಗೆ ಅರ್ಥವಾಗುವುದಿಲ್ಲ. ನೀವು ಇಂಗ್ಲಿಷ್‌ನಲ್ಲಿ ಏಕೆ ಹೇಳುವುದಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು’ ಎಂದು ವಿಡಿಯೊದಲ್ಲಿ ವಿವರಿಸಿದ್ದರು.
‘ಆ ವಿದ್ಯಾರ್ಥಿಯ ಆಕ್ಷೇಪಕ್ಕೆ, ‘ಅವರು ಕನ್ನಡದಲ್ಲಿ ಪ್ರಶ್ನೆ ಕೇಳಿದ್ದಕ್ಕೆ, ಕನ್ನಡದಲ್ಲೇ ಉತ್ತರಿಸಿದೆ. ಇದರಲ್ಲಿ ಸಮಸ್ಯೆ ಏನು? ಇದು ಕನ್ನಡದ ನೆಲ, ಕನ್ನಡವನ್ನು ಗೌರವಿಸಬೇಕು’ ಎಂದು ಆ ವಿದ್ಯಾರ್ಥಿಗೆ ತಿಳಿ ಹೇಳಿದೆ. ಆದರೆ ಮರುದಿನ ನನ್ನನ್ನು ಕರೆಸಿಕೊಂಡಿದ್ದ ಪ್ರಾಂಶುಪಾಲರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು’ ಎಂದು ರೂಪೇಶ್ ಆರೋಪಿಸಿದ್ದರು.
‘ರಾಜೀನಾಮೆ ನೀಡಲು ನಾನು ನಿರಾಕರಿಸಿದೆ. ಆಗ ಅವರು, ಆರ್‌ವಿ ಟ್ರಸ್ಟ್‌ನ ಮತ್ತೊಂದು ಕಾಲೇಜಿನಲ್ಲಿ ಓದುತ್ತಿರುವ ನನ್ನ ಮಗಳ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ ತಡೆಹಿಡಿಯುತ್ತೇವೆ ಎಂದು ಬೆದರಿಕೆ ಹಾಕಿದರು. ಮಗಳ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದೆ’ ಎಂದು ಹೇಳಿದ್ದರು.
‘ಕನ್ನಡದ ನೆಲದಲ್ಲಿ ಕನ್ನಡ ಮಾತನಾಡಿದ್ದಕ್ಕೆ ಯಾರಿಗೂ ಈ ಸ್ಥಿತಿ ಬರಬಾರದು ಎಂದು ಈ ವಿಡಿಯೊ ಹಾಕುತ್ತಿದ್ದೇನೆ’ ಎಂದಿದ್ದರು.
ಈ ವಿಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ಮತ್ತು ಆರ್‌ವಿ ಕಾಲೇಜಿನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸಂಜೆಯ ವೇಳೆಗೆ ಕೆಲ ಕನ್ನಡ ಪರ ಹೋರಾಟಗಾರರು ರೂಪೇಶ್ ಪುತ್ತೂರು ಅವರನ್ನು ಸಂಸ್ಥೆಯ ಜಂಟಿ ನಿರ್ದೇಶಕ ಡಿ.ಪಿ.ನಾಗರಾಜ್ ಅವರ ಕಚೇರಿಗೆ ಕರೆದುಕೊಂಡು ಹೋಗಿ, ಆಕ್ಷೇಪ ವ್ಯಕ್ತಪಡಿಸಿದ್ದರು.
ಸಭೆಯ ನಂತರ ಮತ್ತೊಂದು ವಿಡಿಯೊ ಪೋಸ್ಟ್ ಮಾಡಿದ ರೂಪೇಶ್ ಪುತ್ತೂರು, ‘ತಮ್ಮ ಗಮನಕ್ಕೆ ಬರದೆಯೇ ಈ ರೀತಿ ಆಗಿದೆ. ನಿಮ್ಮ ರಾಜೀನಾಮೆಯನ್ನು ರದ್ದುಪಡಿಸುತ್ತೇವೆ ಎಂದು ಸಂಸ್ಥೆಯ ಜಂಟಿ ನಿರ್ದೇಶಕರು ಹೇಳಿದರು. ನನಗೆ ಎದುರಾಗಿದ್ದ ಸಮಸ್ಯೆಯು, ಕನ್ನಡಿಗರ ಬೆಂಬಲದಿಂದಾಗಿ ಬಗೆಹರಿದಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.