ADVERTISEMENT

ಡಿ.29ರಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 18:18 IST
Last Updated 28 ಡಿಸೆಂಬರ್ 2018, 18:18 IST

ಮೈಸೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಎರಡನೇ ರಾಜ್ಯ ಸಮ್ಮೇಳನ ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಭವನದಲ್ಲಿ ಡಿ.29 ಮತ್ತು 30ರಂದು ನಡೆಯಲಿದ್ದು, ಸಕಲ ಸಿದ್ಧತೆ ನಡೆಸಲಾಗಿದೆ.

ಸಮ್ಮೇಳನದ ಅಂಗವಾಗಿ ‘ಸಾಹಿತ್ಯದಲ್ಲಿ ಭಾರತೀಯತೆ’ ವಿಷಯವನ್ನು ಧ್ಯೇಯವನ್ನಾಗಿಸಿಕೊಂಡು ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಶನಿವಾರ ಬೆಳಿಗ್ಗೆ 10.30ಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು ಸಮ್ಮೇಳನವನ್ನು ಉದ್ಘಾಟಿಸುವರು. ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪರಿಷದ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಋಷಿಕುಮಾರ್‌ ಮಿಶ್ರಾ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಪ್ರೊ.ಪ್ರೇಮಶೇಖರ ಅವರು ಅಧ್ಯಕ್ಷತೆ ವಹಿಸುವರು.

ADVERTISEMENT

ಶನಿವಾರ ಮಧ್ಯಾಹ್ನ ‘ಕರ್ನಾಟಕದ ಭಾಷೆಗಳ ಸಾಹಿತ್ಯದಲ್ಲಿ ಭಾರತೀಯತೆ’ ಮತ್ತು ‘ಸಂಸ್ಕೃತ ಸಾಹಿತ್ಯದಲ್ಲಿ ಭಾರತೀಯತೆ’ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಭಾನುವಾರ ಬೆಳಿಗ್ಗೆ ಬಹುಭಾಷಾ ಕವಿಗೋಷ್ಠಿ ಮತ್ತು ‘ಹಿಂದಿ ಸಾಹಿತ್ಯದಲ್ಲಿ ಭಾರತೀಯತೆ’ ವಿಷಯದಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿದೆ.

ಪ್ರೊ.ಏ.ಕೆ.ಹಂಪಣ್ಣ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ಕೊಂಕಣಿ, ತೆಲುಗು, ತಮಿಳು, ಮಲಯಾಳಂ, ತುಳು ಮತ್ತು ಕೊಡವ ಭಾಷೆಗಳಲ್ಲಿ ಕವನ ವಾಚನ ನಡೆಯಲಿದೆ.

ಭಾನುವಾರ ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಜ್ಞಾಪ್ರವಾಹದ ಅಖಿಲ ಭಾರತ ಸಂಯೋಜಕ ಜೆ.ನಂದಕುಮಾರ್‌ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಾಹಿತಿ ಎಸ್.ಎಲ್.ಭೈರಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 2,000 ಮಂದಿ ಪಾಲ್ಗೊಳ್ಳಲಿದ್ದಾರೆ. ವಿ.ವಿ. ಸೆನೆಟ್‌ ಭವನದಲ್ಲಿ ಶನಿವಾರ ಬೆಳಿಗ್ಗೆ 9ರಿಂದ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪರಿಷದ್‌ನ ಮೈಸೂರು ಘಟಕದ ಅಧ್ಯಕ್ಷ ಸಾತನೂರು ದೇವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.