ADVERTISEMENT

‘ವೇತನ ತಾರತಮ್ಯ ನಿವಾರಿಸಿ’

ಡಿಆರ್‌ಎಫ್‌ಒ ಸಂಘದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 17:06 IST
Last Updated 25 ಸೆಪ್ಟೆಂಬರ್ 2019, 17:06 IST

ಬೆಂಗಳೂರು: ಉಪವಲಯ ಅರಣ್ಯಾಧಿಕಾರಿಗಳು (ಡಿಆರ್‌ಎಫ್‌ಒ) ಹಾಗೂ ಮೋಜಣಿದಾರರ ವೃಂದದ ಅಧಿಕಾರಿಗಳ ನೇಮಕಾತಿಗೆ ಬಿ.ಎಸ್ಸಿ (ವಿಜ್ಞಾನ) ಹಾಗೂ ಬಿ.ಎಸ್ಸಿ (ಅರಣ್ಯ ಶಾಸ್ತ್ರ) ವಿದ್ಯಾರ್ಹತೆ ನಿಗದಿಪಡಿಸಿದ ಬಳಿಕವೂ ವೇತನ ಶ್ರೇಣಿಯನ್ನು ಪಿಯುಸಿ ವಿದ್ಯಾರ್ಹತೆಗೆ ತಕ್ಕಂತೆ ಉಳಿಸಿಕೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಡಿಆರ್‌ಎಫ್‌ಒ ಆಗಿ ನೇಮಕವಾಗಲು ಈ ಹಿಂದೆ ಪಿ.ಯು.ಸಿ (ವಿಜ್ಞಾನ) ಕಲಿತರೆ ಸಾಕಿತ್ತು. 2012ರಲ್ಲಿ ಈ ವೃಂದಕ್ಕೂಬಿ.ಎಸ್ಸಿ (ವಿಜ್ಞಾನ) ಹಾಗೂ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವಿ ಅಗತ್ಯ ಎಂದು ನಿಯಮ ಬದಲಾಯಿಸಲಾಯಿತು. ಪದವಿ ಆಧಾರದಲ್ಲಿ ನೇಮಕವಾಗುವ ಇತರ ವೃಂದಗಳ ಅಧಿಕಾರಿಗಳಿಗೆ ನೀಡುವಷ್ಟೇ ವೇತನವನ್ನು ಡಿಆರ್‌ಎಫ್‌ಒಗಳಿಗೂ ನೀಡಬೇಕು ಎಂದು ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಒತ್ತಾಯಿಸಿದೆ.

‘ಪದವಿ ವಿದ್ಯಾರ್ಹತೆ ಆಧಾರದಲ್ಲಿ ನೇಮಕವಾಗುವ ಪೊಲೀಸ್ ಸಬ್ಇನ್‌ಸ್ಪೆಕ್ಟರ್‌ (ಪಿಎಸ್‌ಐ), ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ), ಸಹಾಯಕ ಕೃಷಿ ಅಧಿಕಾರಿ ಹಾಗೂ ಸಹಾಯಕ ತೋಟಗಾರಿಕಾ ಅಧಿಕಾರಿಗಳಿಗೆ ಹೋಲಿಸಿದರೆ ಡಿಆರ್‌ಎಫ್‌ಗಳ ವೇತನ ಬಹಳ ಕಡಿಮೆ ಇದೆ’ ಎಂದು ಸಂಘದ ಅಧ್ಯಕ್ಷ ಬಸವರಾಜ ಎನ್‌.ಬೆನಕಟ್ಟಿ ತಿಳಿಸಿದರು.

ADVERTISEMENT

‘ಪಿಎಸ್‌ಐ, ಪಿಡಿಒಗಳಿಗೆ ಹೋಲಿಸಿದರೆ ಡಿಆರ್‌ಎಫ್ಒಗಳಿಗೆ ಕೆಲಸ ವ್ಯಾಪ್ತಿ ಜಾಸ್ತಿ. ಅವರು ಸುಮಾರು 50 ಚ.ಕಿ.ಮೀಯಿಂದ 60 ಚ.ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯ ಅಭಿವೃದ್ಧಿಯ ಹೊಣೆ ಅವರದ್ದು. ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ ಹಾಗೂ ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಪ್ಪಿಸುವಲ್ಲಿ ಇವರ ಪಾತ್ರ ಮಹತ್ತರವಾದುದು. ಹಾಗೂ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆರನೇ ವೇತನ ಆಯೋಗದಲ್ಲೂ ಇವರ ವೇತನ ಶ್ರೇಣಿ ನಿಗದಿಪಡಿಸುವಾಗ ತಾರತಮ್ಯ ಆಗಿದೆ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಯವರು 2018ರ ಆ.30ರಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು.

‘ವೇತನ ತಾರತಮ್ಯ ನಿವಾರಿಸುವಂತೆ ಈ ಹಿಂದೆಯೂ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಈ ತಾರತಮ್ಯ ನಿವಾರಿಸಲು ಈಗಿನ ಸರ್ಕಾರವಾದರೂ ಕ್ರಮಕೈಗೊಳ್ಳಬೇಕು’ ಎಂದು ರಾಜ್ಯ ವನ್ಯಜೀವಿ ಮಂಡಲಿ ಸದಸ್ಯ ಮಲ್ಲೇಶಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.