ADVERTISEMENT

ಮರಳು ಗಣಿಗಾರಿಕೆ: ಅಧ್ಯಯನಕ್ಕೆ ಸರ್ಕಾರ ಸಿದ್ಧವಿದೆಯೇ?: ಹೈಕೋರ್ಟ್

ಅಭಿಪ್ರಾಯ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 4:11 IST
Last Updated 4 ಮಾರ್ಚ್ 2021, 4:11 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ಗಣಿಗಾರಿಕೆಗೆ ತಾತ್ಕಾಲಿಕವಾಗಿ ಪರವಾನಗಿ ನೀಡುವ ಕುರಿತು ಅಧ್ಯಯನ ನಡೆಸಲು ಸರ್ಕಾರ ಸಿದ್ಧವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಫಲ್ಗುಣಿ ನದಿಯಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡಿರುವ ಸಂಬಂಧ ಫ್ರಾಂಕಿ ಡಿಸೋಜಾ ಮತ್ತು ಮಂಗಳೂರಿನ ಇತರ 9 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಪರಿಶೀಲನೆ ನಡೆಸಿತು.

‘ಮರಳು ತೆಗೆಯಲು ಅನುಮತಿ ನೀಡುವುದರಿಂದ ಪರಿಸರದ ಮೇಲೆ ಆಗುವ ಹಾನಿ ಮತ್ತು ಗ್ರಾಮಸ್ಥರ ಸಾಂಪ್ರದಾಯಿಕ ಉದ್ಯೋಗದ ಮೇಲೆ ಬೀರುವ ಪರಿಣಾಮದ ಬಗ್ಗೆ ತಜ್ಞ ಸಂಸ್ಥೆಯಿಂದ ಅಧ್ಯಯನ ನಡೆಸಲು ಸರ್ಕಾರ ತಯಾರಿದೆಯೇ ಎಂಬುದು ಪ್ರಶ್ನೆ. ಅಧ್ಯಯನ ನಡೆಸಲು ಸಿದ್ಧವಿರುವ ಬಗ್ಗೆ ಮತ್ತು ಆ ಅಧ್ಯಯನ ಪೂರ್ಣಗೊಳ್ಳುವ ತನಕ ಪರವಾನಗಿ ನೀಡದಿರುವ ಬಗ್ಗೆ ಸರ್ಕಾರ ಹೇಳಿಕೆ ಸಲ್ಲಿಸಬೇಕು’ ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಮಾ.12ಕ್ಕೆ ನಿಗದಿ ಮಾಡಿತು.

ADVERTISEMENT

ಕರ್ನಾಟಕ ಸಣ್ಣ ಖನಿಜ ನಿಯಮಗಳಿಗೆ(1994) ವಿರುದ್ಧವಾಗಿ ಯಾವುದೇ ತಾತ್ಕಾಲಿಕ ಪರವಾನಗಿ ನೀಡಬಾರದು ಎಂದು ಈ ಹಿಂದಿನ ವಿಚಾರಣೆ ವೇಳೆ ಪೀಠ ತಿಳಿಸಿತ್ತು. 2011ರ ನವೆಂಬರ್ 8ರ ಕಚೇರಿ ಜ್ಞಾಪನ ಪತ್ರದ ಪ್ರಕಾರ, ಕರಾವಳಿ ನಿಯಂತ್ರಣಾ ವಲಯದಲ್ಲಿ ಮರಳು ತೆಗೆಯಲು ಅನುಮತಿ ನೀಡಬಹುದು ಎಂದು ಫೆಬ್ರುವರಿ 25ರಂದು ಸರ್ಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.