ADVERTISEMENT

ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ: ರಾಜಕೀಯ ನಾಯಕರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 21:16 IST
Last Updated 18 ಡಿಸೆಂಬರ್ 2021, 21:16 IST
ಬೆಳಗಾವಿಯ ಅನಗೋಳದ ಕನಕದಾಸ ಕಾಲೊನಿಯಲ್ಲಿ ಕಿಡಿಗೇಡಿಗಳು ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದಾರೆ
ಬೆಳಗಾವಿಯ ಅನಗೋಳದ ಕನಕದಾಸ ಕಾಲೊನಿಯಲ್ಲಿ ಕಿಡಿಗೇಡಿಗಳು ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದಾರೆ   

ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಜೋಶಿ
ಹುಬ್ಬಳ್ಳಿ:
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವ ಕೃತ್ಯ ಖಂಡನೀಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದವರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರಕ್ಕೆ ಸೂಚಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಭಾಷಾ ಬಾಂಧವ್ಯ ಕೆಡಿಸುವ ದುಷ್ಕರ್ಮಿಗಳು ಕೃತ್ಯ ಅಕ್ಷಮ್ಯ.ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜ್‌ ನಮ್ಮ ಹೆಮ್ಮೆಯ ಪ್ರತೀಕ. ಪ್ರತಿಯೊಬ್ಬರೂ ಹೆಮ್ಮೆ, ಗರ್ವದಿಂದ ಸ್ಮರಿಸುವ ಭಾರತದ ಪುತ್ರರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂರ್ತಿ ಭಗ್ನ ಅಕ್ಷಮ್ಯ: ಯಡಿಯೂರಪ್ಪ
ಮೈಸೂರು
: 'ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಮಾಡಿರುವ ಘಟನೆ ಅಕ್ಷಮ್ಯ, ಖಂಡನೀಯ. ಹದ್ದು ಮೀರಿದ ವರ್ತನೆ ಸಹಿಸಲು ಸಾಧ್ಯವಿಲ್ಲ' ಎಂದು ಶಾಸಕ ಬಿ.ಎಸ್.ಯಡಿಯೂರಪ್ಪ ಶನಿವಾರ ಹೇಳಿದರು.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿ, 'ಈ ಬಗ್ಗೆ ಅಧಿವೇಶನದಲ್ಲೂ ಚರ್ಚಿಸಲಾಗುವುದು. ದುಷ್ಕರ್ಮಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ’ ಎಂದರು.

ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಲ್ಲಿನಲ್ಲಿ ನಿರ್ಮಿಸಿರುವ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇಗುಲವನ್ನು ಯಡಿಯೂರಪ್ಪ ಉದ್ಘಾಟಿಸಿದರು.

‘ಮುಖ್ಯಮಂತ್ರಿ ಪ್ರೋತ್ಸಾಹದ ಪರಿಣಾಮ’
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತೀಯ ಗೂಂಡಾಗಿರಿಯನ್ನು ಪ್ರೋತ್ಸಾಹಿಸಿದ್ದರ ಪರಿಣಾಮ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯ ಭಗ್ನ ಮತ್ತು ದಾಂಧಲೆ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಶನಿವಾರ ಹೇಳಿದರು.

‘ಇದು ಕರ್ನಾಟಕ, ಶಾಂತಿ ಕಾಪಾಡಬೇಕು. ಕರ್ನಾಟಕದಲ್ಲಿರುವವರೆಲ್ಲರೂ ಕನ್ನಡಿಗರೇ, ಕನ್ನಡ ಪ್ರೇಮಿಗಳೇ. ನಮ್ಮ ಭಾಷೆ, ನಮ್ಮ ಬಾವುಟ ನಮ್ಮದೇ. ಇಲ್ಲಿ ಯಾವುದೇ ಜಾತಿ ಮೇಲೆ ದೂಷಿಸುವುದಲ್ಲ. ಪ್ರತಿಮೆ ಭಗ್ನ ಮಾಡಿರುವುದು ಸರಿಯಲ್ಲ’ ಎಂದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬೆಳಗಾವಿಯಲ್ಲಿ ನಡೆಯುತ್ತಿರುವ ಪುಂಡಾಟಿಕೆಯನ್ನು ಕಾಂಗ್ರೆಸ್‌ ಪಕ್ಷ ಖಂಡಿಸುತ್ತದೆ. ಮತೀಯ ಗೂಂಡಾಗಿರಿ ಬೆಂಬಲಿಸದಂತೆ ನಾವು ಕೋರಿದ್ದೆವು. ಮುಖ್ಯಮಂತ್ರಿ ಪ್ರೋತ್ಸಾಹಿಸಿದ್ದರು. ಪರಿಣಾಮ ಈಗ ಪಶ್ಚಾತ್ತಾಪ ಪಡುವಂತಾಗಿದೆ’ ಎಂದರು.

ಎಂಇಎಸ್‌ನಿಂದ ಅಶಾಂತಿ: ಕ್ರಮಕ್ಕೆ ಎಚ್‌.ಕೆ.ಪಾಟೀಲ ಆಗ್ರಹ
ಗದಗ:
‘ಎಂಇಎಸ್‌ನವರಿಂದ ಅಶಾಂತಿ ಸೃಷ್ಟಿಸುವ ಕೆಲಸವಾಗುತ್ತಿದೆ. ರಾಷ್ಟ್ರದ್ರೋಹಿ‌ ಕೃತ್ಯ ಎಸಗಿದವರ ವಿರುದ್ಧ ರಾಜ್ಯ ಸರ್ಕಾರ ಉಗ್ರ ಕ್ರಮಕೈಗೊಳ್ಳಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಶನಿವಾರ ಆಗ್ರಹಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಸ್ವಾಭಿಮಾನ, ದೇಶ ನಿಷ್ಠೆಗೆ ಹೆಸರಾದ ಸಂಗೊಳ್ಳಿ ರಾಯಣ್ಣ ಯುವಕರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ. ಬೆಳಗಾವಿಯಂತಹ ಸುಸಂಸ್ಕೃತ ನಾಡಿನಲ್ಲಿ ಎಂಇಎಸ್ ಪುಂಡಾಟ ಹೆಚ್ಚಿದೆ.ಬಿಜೆಪಿ ಸರ್ಕಾರ ಕಾನೂನು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.