ಬೆಂಗಳೂರು: ‘ಹೆದ್ದಾರಿ ಬದಿಯ ಡಾಬಾ, ಹೋಟೆಲ್, ಗ್ಯಾರೇಜ್‌ಗಳಲ್ಲಿ ಮಕ್ಕಳಿಂದ ಕೆಲಸ ಮಾಡಿಸುತ್ತಿರುತ್ತಾರೆ. ಅಂತಹದ್ದು ಯಾರ ಗಮನಕ್ಕೆ ಬಂದರೂ, 1098 ಸಹಾಯವಾಣಿಗೆ ಕರೆ ಮಾಡಿ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕರೆ ನೀಡಿದರು.
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾರ್ಮಿಕ ಇಲಾಖೆಯು ನಗರದ ಎಂ.ಜಿ.ರಸ್ತೆಯ ಗಾಂಧಿ ವೃತ್ತದಿಂದ ಕೆ.ಆರ್.ವೃತ್ತದವರೆಗೆ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮಕ್ಕಳು ಬಾಲ ಕಾರ್ಮಿಕರಾಗುವುದನ್ನು ತಡೆಯಲು ಕಾರ್ಮಿಕ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಆದರೂ ಹಲವು ಮಕ್ಕಳು ಓದುವುದನ್ನು ಬಿಟ್ಟು, ದುಡಿಮೆಯಲ್ಲಿ ತೊಡಗಿದ್ದಾರೆ. ಅವರೆಲ್ಲಾ ಮತ್ತೆ ಶಾಲೆಗೆ ಹೋಗುವಂತಾಗಬೇಕು. ಈ ಗುರಿ ಸಾಧನೆಯಲ್ಲಿ ಸಾರ್ವಜನಿಕರೂ ಸರ್ಕಾರದೊಂದಿಗೆ ಕೈ ಜೋಡಿಸಬೇಕು’ ಎಂದು ಕೋರಿದರು.
ನಟಿ ಅದಿತಿ ಪ್ರಭುದೇವ, ‘ಮಕ್ಕಳು ಕಾರ್ಮಿಕರಾಗುವುದನ್ನು ತಡೆಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೂ ಇದೆ. ಬಡತನಕ್ಕೂ ಬಾಲಕಾರ್ಮಿಕ ಪದ್ಧತಿಗೂ ಸಂಬಂಧವಿದೆ. ಬಡತನ ಹೋಗಲಾಡಿಸಿದರೆ, ಈ ಸಮಸ್ಯೆಯೂ ನಿವಾರಣೆಯಾಗಲಿದೆ. ಮಕ್ಕಳನ್ನು ಓದಿಸಲಾಗದ ಪರಿಸ್ಥಿತಿಯಲ್ಲಿ ಎಷ್ಟೋ ಪೋಷಕರು ಇದ್ದಾರೆ. ನಾವು ಸಣ್ಣ ಸಹಾಯ ಮಾಡಿದರೆ ಎಷ್ಟೋ ಮಕ್ಕಳು ಬಾಲ ಕಾರ್ಮಿಕರಾಗುವುದು ತಪ್ಪಲಿದೆ’ ಎಂದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಇಲಾಖೆ ಆಯುಕ್ತ ಎಚ್.ಎನ್.ಗೋಪಾಲಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಭಾರತಿ ಜಾಥಾದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.